KEA EXAM SCAM: ಸುರ್ಜೇವಾಲಾ, ವೇಣುಗೋಪಾಲ್ ರಾಜ್ಯ ಭೇಟಿ: ಬಿಜೆಪಿ ಟೀಕೆಗೆ ತಿರುಗೇಟು ನೀಡಿದ ಗೃಹ ಸಚಿವ ಪರಮೇಶ್ವರ್

ಬೆಂಗಳೂರು : ಬಿಜೆಪಿ ಪಕ್ಷದ ನಾಯಕರು ಬ್ಯಾಗ್ ನ್ನು ಹೆಗಲಮೇಲೆ ಹಾಕೊಂಡು ಯಾವತ್ತೂ ಹೋಗುತ್ತಿರುತ್ತಾರೆ, ಅದೇ ಅವರ ಚಾಳಿಯಾಗಿದೆ ಎಂದು ಬಿಜೆಪಿಯವರನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ್ ಲೇವಡಿ ಮಾಡಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಆ ರೀತಿ ಮಾತನಾಡಬಾರದು ಎಂದು ತಾಕೀತು ಮಾಡಿದರಲ್ಲದೆ, ಅವರಿದ್ದಾಗ ಅವರ ಪಕ್ಷದ ಸೆಕ್ರೆಟರಿ ಬಂದು ಆ ರೀತಿ ಮಾಡುತ್ತಿದ್ದರಾ ಎಂದು ಪ್ರಶ್ನಿಸಿದರು.
ಅವರ ಜನರಲ್ ಸೆಕ್ರೆಟರಿ ಪದೇ ಪದೇ ರಾಜ್ಯಕ್ಕೆ ಬರುತ್ತಿದ್ರು, ಈಗ ನಾವು ಕೂಡ ಅದನ್ನೇ ಹೇಳಬೇಕಲ್ವಾ? ಅವರು ಮಾಡಿದ್ದನ್ನು ನಮಗೆ ಹೇಳುತ್ತಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಬಿಜೆಪಿ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಉಸ್ತುವಾರಿಗಳಾದ ಸುರ್ಜೇವಾಲಾ ಹಾಗೂ ವೇಣುಗೋಪಾಲ್ ಅವರು ನಮ್ಮನ್ನು ಭೇಟಿ ಮಾಡಿಲ್ಲ, ಸಿಎಂ, ಡಿಸಿಎಂ ಅವರನ್ನು ಮಾತ್ರ ಭೇಟಿ ಮಾಡಿದ್ದಾರೆ, ಯಾವ ವಿಚಾರ ಚರ್ಚೆ ಮಾಡಿದ್ದಾರೆ ಗೊತ್ತಿಲ್ಲ ಎಂದು ತಿಳಿಸಿದರು.
ಈಗಲಾದರೂ ಬರ ಬಿಜೆಪಿಯವರು ಎಚ್ಚೆತ್ತುಕೊಂಡಿದ್ದಾರಲ್ಲ
ಬಿಜೆಪಿ ಬರ ಅಧ್ಯಯನ ಪ್ರವಾಸ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮಾಡಲಿ, ಇಷ್ಟು ದಿನ ಏನು ಮಾಡುತ್ತಿದ್ರು, ಬರ ಶುರುವಾಗಿ ಸರಿಸಮಾರು 3 ತಿಂಗಳು ಕಳೆದಿದೆ. ನಾವು ಡಿಕ್ಲೇರ್ ಮಾಡಿದ್ದೇವೆ, 37 ಸಾವಿರ ಕೋಟಿ ನಷ್ಟ ಎಂದು ಅಂದಾಜಿದೆ, 17 ಸಾವಿರ ಕೋಟಿ ನಷ್ಟ ಪರಿಹಾರಕ್ಕೆ ಮನವಿ ಮಾಡಲಾಗಿದೆ. ಅದನ್ನು ನೀಡಲಿ ಎಂದರು.
ಕೇಂದ್ರ ಸರ್ಕಾರದಿಂದ ಒಂದು ಪೈಸೆನೂ ಬಿಡುಗಡೆಯಾಗಿಲ್ಲ, ಕೇಂದ್ರದ ತಂಡ ಎಲ್ಲೋ ಕಾಟಾಚಾರಕ್ಕೆ ಬಂದು ಹೋಗಿದೆ, ಚರ್ಚೆ ಮಾಡಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ ಅವರು, ಏನನ್ನು ಮಾಡಿಲ್ಲ ಕಾಟಾಚಾರಕ್ಕೆ ಬರ ಅಧ್ಯಯನ ಮಾಡಿದ್ದಾರೆ ಎಂದು ಕಿರಿಡಿಕಾರಿದರು.
ಕನ್ನಡ ಬಾವುಟದ ಒಪ್ಪಿಗೆಗಾಗಿ ಪತ್ರ ಬರೆಯಲಾಗಿದೆ.
ಕನ್ನಡ ಬಾವುಟಕ್ಕೆ ಕೇಂದ್ರ ಅನುಮತಿ ನೀಡದೇ ಇರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆ ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇವೆ, ರಾಜ್ಯಕ್ಕೆ ಅಧಿಕೃತ ರಾಜ್ಯ ಬಾವುಟ ಬೇಕು, ಅನುಮತಿ ಸಿಕ್ಕರೆ ರಾಜ್ಯಕ್ಕೂ ಗೌರವ ಸಿಗಲಿದೆ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ, ಅದಕ್ಕೆ ಕೇಂದ್ರ ಒಪ್ಪಿಗೆ ಕೊಡಬೇಕು ಎಂದರು.
ಕೇಂದ್ರದ ಮೇಲೆ ಒತ್ತಡ ಹಾಕುತ್ತೇವೆ, ಒತ್ತಡ ಅಂದರೆ ತಲೆ ಮೇಲೆ ಕಲ್ಲು ಇಡುವುದಲ್ಲ ಎಂದು ಹೇಳಿದ ಅವರು, ಇನ್ನೊಂದು ಪತ್ರ ಬರೆದು ಆಗ್ರಹ ಮಾಡಬಹುದು ಅಷ್ಟೆ ಎಂದು ಗೃಹ ಸಚಿವ ಪರಮೇಶ್ವರ್ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಕೆ ಇಎ ಪರೀಕ್ಷೆಯಲ್ಲಿ ನಡೆದ ಅವ್ಯವಹಾರ ಸಂಬಂಧ ಪೊಲೀಸರಿಗೆ ತನಿಖೆ ಮಾಡಲು ಹೇಳಿದ್ದೇವೆ, ಇಲಾಖೆ ಕೂಡ ತನಿಖೆ ಮಾಡುತ್ತಿದೆ, ಇನ್ನು ಮಾಹಿತಿ ತೆಗೆದುಕೊಳ್ಳಬೇಕು, ರಿ ಎಕ್ಸಾಮ್ ಮಾಡಬೇಕ ಬೇಡ್ವಾ ಇಲಾಖೆಗೆ ಬಿಟ್ಟಿದ್ದು, ಚರ್ಚೆ ಮಾಡಿ ಇಲಾಖೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ಕಂಪ್ಲೇಂಟ್ ಬಗ್ಗೆ ನಮ್ಮ ಇಲಾಖೆ ತೀರ್ಮಾನ ಮಾಡುತ್ತದೆ, ಪಿಎಸ್ಐ ಅಕ್ರಮದಲ್ಲಿ ಆರ್.ಡಿ ಪಾಟೀಲ್ ಲಿಂಕ್ ಇದೆ ಎಂದು ಗೊತ್ತಾಗಿದೆ, ಅದೆಲ್ಲ ಎಕ್ಸಾಮಿನ್ ಮಾಡುತ್ತಾರೆ, ಲಿಂಕ್ ಇದ್ರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ತೇವೆ ಎಂದರು.

More News