DK SHIVAKUMAR SHOULD BE CM: ಮುಂದಿನ 5 ವರ್ಷ ನಾನೇ ಸಿಎಂ ಹೇಳಿಕೆಗೆ ಸ್ವಪಕ್ಷೀಯ ಶಾಸಕರಿಂದ ತೀವ್ರ ವಿರೋಧ: ಡಿ ಕೆ ಶಿವಕುಮಾರ್ ಸಿಎಂ ಆಗಬೇಕು: ಇಕ್ಬಾಲ್ ಹುಸೇನ್

ರಾಮನಗರ : ಮುಂದಿನ ಐದು ವರ್ಷ ನಾನೇ ಸಿಎಂ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಸ್ವಪಕ್ಷೀಯ ಶಾಸಕ ಇಕ್ಬಾಲ್ ಹುಸೇನ್ ಟಾಂಗ್ ನೀಡಿದ್ದು, ಒಂದೂವರೆ ವರ್ಷದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಆಗಬೇಕು, ಅವರು ಸಿಎಂ ಆಗಬೇಕು ಅನ್ನೋದು ನಮ್ಮ ಆಸೆ ಎಂದರು.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ್ದಾರೆ. ಶಕ್ತಿ ಮೀರಿ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಹಾಗಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಒಂದು ಅವಕಾಶ ಸಿಗಲೇಬೇಕು ಎಂದು ಆಗ್ರಹಿಸಿದರು.
ರಾಜ್ಯದ ಜನತೆ ಕೂಡಾ ಇದನ್ನೇ ಬಯಸುತ್ತಿದ್ದಾರೆ ಎಂದು ಹೇಳಿ ಡಿಕೆಶಿ ಪರ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಬ್ಯಾಟಿಂಗ್ ಮಾಡಿದರು.
ಸಿಎಂ ಬದಲಾವಣೆ ಬಗ್ಗೆ ಮಾತನಾಡುವವರು ಕೆಲಸಕ್ಕೆ ಬಾರದವರು ಎಂಬ ಸಿಎಂ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, ಇಲ್ಲಿ ಕೆಲಸಕ್ಕೆ ಬಾರದವರು ಯಾರೂ ಇಲ್ಲ, ಎಲ್ಲರೂ ಕೆಲಸಕ್ಕೆ ಬರುವವರೇ, ಆದ್ದರಿಂದಲೇ ಅವರನ್ನು ಶಾಸಕ ಅಂತ ಕರೆಯುತ್ತಾರೆ. ಅವರ ಬಗ್ಗೆ ಕೀಳಾಗಿ ಮಾತನಾಡಬಾರದು ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

More News