BREAKFAST MEETING: ಡಿನ್ನರ್ ಆಯಿತು ಇದೀಗ ಬ್ರೇಕ್ ಫಾಸ್ಟ್ ಮೀಟಿಂಗ್: 16 ಜನ ಸಚಿವರಿಗೆ ಇಂದು ಸಿಎಂ ನಿವಾಸದಲ್ಲಿ ಉಪಹಾರದ ಜತೆ ಚರ್ಚೆ

ಬೆಂಗಳೂರು : ಡಿನ್ನರ್ ಪಾರ್ಟಿ ಮೀಟಿಂಗ್ ನಂತರ ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ಕಾಂಗ್ರೆಸ್ ನಲ್ಲಿ ಭಾರೀ ಸಂಚಲನ ಮೂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವರ ನಿವಾಸದಲ್ಲಿ ಇಂದು ಸಚಿವರಿಗೆ ಬ್ರೇಕ್ ಫಾಸ್ಟ್ ಮೀಟಿಂಗ್ ಕರೆದಿದ್ದಾರೆ.
ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ಕಾವೇರಿಯಲ್ಲಿ ನಡೆಯಲಿರುವ ಇಂದಿನ ಬ್ರೇಕ್ ಫಾಸ್ಟ್ ಕೂಟಕ್ಕೆ 16 ಜನ ಸಚಿವರಿಗೆ ಕರೆ ನೀಡಲಾಗಿದೆ. ಉಳಿದ 16 ಜನ ಸಚಿವರಿಗೆ ಮುಂದಿನ ಶನಿವಾರ ಉಪಹಾರ ಮೀಟಿಂಗ್ ನಿಗದಿ ಮಾಡಲಾಗಿದೆ.
ಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಗೆ ಗೈರಾದ ಸಚಿವ ಸತೀಶ್ ಜಾರಕಿಹೊಳಿ
ಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಗೆ ಸಚಿವ ಸತೀಶ್ ಜಾರಕಿಹೊಳಿ ಭಾಗವಹಿಸಿರಲಿಲ್ಲ. ಅನಾರೋಗ್ಯದ ಕಾರಣದಿಂದ ಬೆಳಗಾವಿಯಲ್ಲೇ ಇರುವ ಸಚಿವರು, ಸಭೆಗೆ ಬರಲು ಸಾಧ್ಯವಿಲ್ಲ ಎಂಬ ಮಾಹಿತಿ‌ಯನ್ನು ರವಾನಿಸಿದ್ದಾರೆ.
ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಸಮೀಕ್ಷೆ‌ ನಡೆಸಲು‌ ಕೆಪಿಸಿಸಿ ಸಚಿವರಿಗೆ ಜವಾಬ್ದಾರಿ ನೀಡಿತ್ತು. ಕೆಪಿಸಿಸಿ ಅಧ್ಯಕ್ಷರು ನೀಡಿದ್ದ ಜವಾಬ್ದಾರಿಯನ್ನು ಸರಿಯಾಗಿ ಅನೇಕ ಸಚಿವರು ನಿರ್ವಹಿಸಲಿಲ್ಲ, ಬದಲಾಗಿ ಕಾಟಾಚಾರಕ್ಕೆ ಸಮೀಕ್ಷೆ ನಡೆಸಿ ಆಕಾಂಕ್ಷಿ ಅಭ್ಯರ್ಥಿಗಳ ವರದಿಯನ್ನು ನೀಡಿದ್ದರು.
ಸಚಿವರ ಈ ನಡೆ ಬಗ್ಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಮತ್ತೊಮ್ಮೆ ಕ್ಷೇತ್ರದ ಶಾಸಕರು, ಜಿಲ್ಲಾಧ್ಯಕ್ಷರು, ಮಾಜಿ‌ ಶಾಸಕರು, ಪ್ರಮುಖ ನಾಯಕರು, ಪದಾಧಿಕಾರಿಗಳ ಸಭೆ ನಡೆಸಿ ‌ವರದಿ ಸಿದ್ದಪಡಿಸಲು ಅವರು ಸೂಚಿಸಿದ್ದರು.

ಸಚಿವರಿಗೆ ನೀಡಿದ ಟಾಸ್ಕ್ ಬಗ್ಗೆ ಉಪಹಾರ ಕೂಟದ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆಗಳಿವೆ, ಹಾಗೆಯೇ ಮುಂಬರುವ ಲೋಕಸಭಾ ಚುನಾವಣೆ, ಕಾಂಗ್ರೆಸ್ ಕಾರ್ಯತಂತ್ರ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.
ಇಂದಿನ ಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಭಾಗಿಯಾಗಲಿರುವ ಸಚಿವರು
ಡಿಸಿಎಂ ಡಿ.ಕೆ.ಶಿವ ಕುಮಾರ್
ಡಾ.ಜಿ.ಪರಮೇಶ್ವರ್
ಬೈರತಿ ಸುರೇಶ್
ಕೃಷ್ಣಾ ಬೈರೇಗೌಡ
ಜಮೀರ್ ‌ಅಹಮದ್ ಖಾನ್
ಎಂ.ಬಿ.ಪಾಟೀಲ್
ಹೆಚ್ ಸಿ ಮಹದೇವಪ್ಪ
ಪ್ರಿಯಾಂಕ ಖರ್ಗೆ
ರಾಮಲಿಂಗ ರೆಡ್ಡಿ
ಕೆ ಎನ್ ರಾಜಣ್ಣ
ದಿನೇಶ್ ಗುಂಡೂರಾವ್
ಕೆ ಜೆ ಜಾರ್ಜ್
ಸದ್ಯ ಮುಖ್ಯಮಂತ್ರಿ ಅವರು ಸಚಿವರ ಕಾರ್ಯವೈಖರಿ ಮತ್ತು ಮತ್ತು ಮುಂಬರುವ ಲೋಕಸಭಾ ಚುನಾವಣೆಯ ಸಂಬಂಧ ಗಂಭೀರ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಹಾಗೆಯೇ ಅಸಮಾಧಾನಗೊಂಡಿರುವ ಸಚಿವರ ಮನವೊಲಿಸುವ ಕಾರ್ಯಕ್ಕೆ ಮುಖ್ಯಮಂತ್ರಿ ಅವರು ಕೈಹಾಕಿದ್ದಾರೆ ಎಂದು ತಿಳಿದುಬಂದಿದೆ.

More News

You cannot copy content of this page