ಬೆಂಗಳೂರು : ವರಿಷ್ಠರು ನೀಡಿರುವ ಸೂಚನೆಯ ನಂತರವೂ ಮುಖ್ಯಮಂತ್ರಿ ಪದವಿ ಬಗ್ಗೆ ಹೇಳಿಕೆಯನ್ನು ನೀಡಿದ ಸಚಿವ ಕೆ ಎನ್ ರಾಜಣ್ಣ ವಿರುದ್ಧ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ದೂರು ನೀಡಿದ್ದಾರೆ.
ಭಾನುವಾರ ಎಐಸಿಸಿ ಕಟ್ಟು ನಿಟ್ಟಿನ ಆದೇಶ ನೀಡಿತ್ತು. ಅದರ ನಂತರವೂ ಸಿಎಂ ಸಿದ್ದರಾಮಯ್ಯ ಅವರ ನಂತರ ಗೃಹ ಸಚಿವ ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕು ಎಂಬ ಹೇಳಿಕೆ ಸಚಿವ ಕೆ ಎನ್ ರಾಜಣ್ಣ ನೀಡಿದ್ದರು. ಇದರಿಂದ ಅನೇಕ ನಾಯಕರಲ್ಲಿ ಭಿನ್ನಾಭಿಪ್ರಾಯ ಮೂಡಿಸುವ ಕೆಲಸ ಮಾಡಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.
ಎನ್.ರಾಜಣ್ಣ ಹಿರಿಯ ನಾಯಕರು, ಅವರಿಗೆ ಸಹಕಾರ ಖಾತೆಯನ್ನೇ ನೀಡಲಾಗಿದೆ, ಆದರೆ ಅವರ ಫರ್ಪಾರ್ಮೆನ್ಸ್ ಏನೂ ಇಲ್ಲ, ಸಹಕಾರ ಇಲಾಖೆಯಲ್ಲಿ ಏನೂ ಕೆಲಸ ಮಾಡಿಲ್ಲ, ಕೇವಲ ಅನಗತ್ಯ ಹೇಳಿಕೆಗಳನ್ನ ನೀಡುತ್ತಾರೆ, ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ದಯವಿಟ್ಟು ರಾಜಣ್ಣ ವಿರುದ್ಧ ಶಿಸ್ತುಕ್ರಮ ಜರುಗಿಸಿ ಎಂದು ಕಾರ್ಯಕರ್ತರು ಬರೆದಿರುವ ಪತ್ರದಲ್ಲಿ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ. ಸರ್ಕಾರ ರಚನೆಯಾಗಿ ಐದು ತಿಂಗಳು ಕಳೆದಿದೆ, ಉತ್ತಮ ಆಡಳಿತವನ್ನ ಸರ್ಕಾರ ನೀಡುತ್ತಿದೆ, ಐದು ಗ್ಯಾರೆಂಟಿಗಳನ್ನ ಅನುಷ್ಠಾನ ಮಾಡಿದೆ, ಸರ್ಕಾರ ಜನರ ವಿಶ್ವಾಸವನ್ನೂ ಗಳಿಸುತ್ತಿದೆ, ಇಂತ ವೇಳೆ ಅನಗತ್ಯ ಹೇಳಿಕೆಗಳು ಸರಿಯಲ್ಲ ಎಂದು ತಿಳಿಸಿದ್ದಾರೆ.
ಸಿಎಂ, ಡಿಸಿಎಂ ಬಗ್ಗೆ ಹೇಳಿಕೆ ನೀಡುವುದು ತರವಲ್ಲ ಮೊದಲು ಸಚಿವ ರಾಜಣ್ಣ ವಿರುದ್ಧ ಶಿಸ್ತುಕ್ರಮ ಜರುಗಿಸಿ ಎಂದು ಸುರ್ಜೇವಾಲಾ ಅವರಿಗೆ ಪತ್ರ ಬರೆದಿದ್ದಾರೆ.