ಶಿವಮೊಗ್ಗ: ಶಿವಮೊಗ್ಗ ರೈಲ್ವೆ ನಿಲ್ದಾಣದ ವಾಹನ ನಿಲುಗಡೆ ಪ್ರದೇಶದಲ್ಲಿ ಭಾನುವಾರ ವಾರಸುದಾರರಿಲ್ಲದ ಎರಡು ಕಬ್ಬಿಣದ ಪೆಟ್ಟಿಗೆಗಳು ಪತ್ತೆಯಾಗಿವೆ. ಇದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಸ್ಥಳದಲ್ಲಿ ಆತಂಕ ಸೃಷ್ಟಿ ಮಾಡಿದೆ.

ಘಟನೆ ಸಂಬಂಧ ತಿಪಟೂರಿನಲ್ಲಿ ಇಬ್ಬರನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ತಿಪಟೂರಿನ ಗಾಂಧಿನಗರದ ನಿವಾಸಿ ನಸರುಲ್ಲಾ ಹಾಗೂ ಭೋವಿ ಕಾಲೋನಿಯ ಜಬಿವುಲ್ಲಾರನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರೂ ಬಾಕ್ಸ್ ಇಡಲು ಬಳಸಿದ್ದ ಕಾರಿನ ಚಾಲಕರಾಗಿದ್ದಾರೆ ಎಂದು ತಿಳಿದುಬಂದಿದೆ.
ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಎರಡು ಬಾಕ್ಸ್ ಗಳನ್ನು ಗೋಣಿ ಚೀಲದಲ್ಲಿ ಇಟ್ಟು ಸುತ್ತಲಾಗಿದೆ. ಚೀಲದ ಮೇಲೆ ಬಾಂಗ್ಲಾದೇಶ ಎಂದು ಬರೆಯಲಾಗಿದೆ. ಬಾಂಬ್ ಪತ್ತೆ ದಳ ಮತ್ತು ಶ್ವಾನ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ನಿಲ್ದಾಣದಲ್ಲಿದ್ದ ಬಾಕ್ಸ್ ಗಳನ್ನು ಅಟೋ ಚಾಲಕರು ಗಮನಿಸಿ ರೈಲ್ವೆ ರಕ್ಷಣಾ ಪಡೆಗೆ ಮಾಹಿತಿ ತಿಳಿಸಿದ್ದಾರೆ. ಬಾಕ್ಸ್ ಗಳಿಗೆ ಬೀಗ ಹಾಕಲಾಗಿದ್ದು, ಒಳಗೆ ಏನಿದೆ ಎನ್ನುವುದು ಇದುವರೆಗೂ ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.