ಬೆಂಗಳೂರು : ದಲಿತ ಸಿಎಂ ವಿಚಾರ 2013 ರಿಂದಲೂ ಓಡುತ್ತಲೆ ಇದೆ. 5 ವರ್ಷ ಅದೇ ಓಡಿತು, ಆದರೆ ಪಿಚ್ಚರ್ ರಿಲೀಸ್ ಆಗಲಿಲ್ಲ. ಹಿಂದೆ ಖರ್ಗೆಯವರು ಇದ್ದಾಗಲೂ ಅವಕಾಶ ಆಗಲಿಲ್ಲ. ಪರಮೇಶ್ವರ್ ಅವರು 8 ವರ್ಷ ಅಧ್ಯಕ್ಷರಾಗಿದ್ದರು ಅವರಿಗೆ ಡಿಸಿಎಂ ಆಗೋಕು ಆಗಲಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡುವರೆ ವರ್ಷದ ನಂತರ ಏನಾಗುತ್ತೆ ಅಂತ ಸಿಎಂ, ಡಿಸಿಎಂ ಇದಾರೆ, ಪಕ್ಷದ ಅಧ್ಯಕ್ಷರು ಇದ್ದಾರೆ, ಹೈ ಕಮಾಂಡ್ ನಾಯಕರಿದ್ದಾರೆ, ಅದೆಲ್ಲಾವನ್ನು ಅವರು ತೀರ್ಮಾನ ಮಾಡುತ್ತಾರೆ ಎಂದು ವಿವರಿಸಿದರು.
ಸ್ವಾಮೀಜಿಯವರು ಪಕ್ಷದ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಪ್ರಶ್ನೆ ಪ್ರತಿಕ್ರಿಯೆ ನೀಡಿದ ಅವರು, ಅದರಲ್ಲಿ ಹೊಸತೇನು ಇಲ್ಲಾ. ಅದು ಓಲ್ಡ್ ಸ್ಕೀಮ್, ಅವರು ಮೊದಲಿನಿಂದಲು ಹೇಳುತ್ತಿದ್ದಾರೆ. ಈಗಲು ಹೇಳಿದ್ದಾರೆ. ಸಹಜವಾಗಿಯೆ ಸಮುದಾಯದ ಪರವಾಗಿ ಮಾತನಾಡುತ್ತಾರೆ ಎಂದರು.
ಸಿಎಂ ವಿರುದ್ಧ ಪ್ರಧಾನಿ ಟೀಕೆ
ಮಧ್ಯ ಪ್ರದೇಶದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಾಗ್ದಾಳಿ ನಡೆಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಅದೆಲ್ಲಾ ಸಹಜ, ಒಂದು ರಾಜ್ಯದಲ್ಲಿ ಇನ್ನೊಂದು ರಾಜ್ಯವನ್ನ ಬಯ್ಯುವುದು. ಟೀಕೆ ಮಾಡುವುದು ಎಂದರು.
ಅವರು ಆರೋಪ ಮಾಡಿದ್ದಾರೆ, ಅವರ ಆರೋಪವನ್ನ ಒಪ್ಪಬೇಕು ಅಂತಿಲ್ಲ, ನಾವು ಅವರ ವಿರುದ್ದ 40% ಕಮಿಷನ್ ಆರೋಪ, ಪೇ ಸಿಎಂ ಆರೋಪ ಮಾಡಿದ್ದೇವು, ಅವರು ಒಪ್ಪಿಕೊಂಡ್ರಾ….? ಎಂದು ಮರುಪ್ರಶ್ನಿಸಿದರು.
ಜಾತಿಗಣತಿ ವರದಿ ಬಗ್ಗೆ ಸಾರ್ವಜನಿಕ ಚರ್ಚೆಯಾಗಲಿ
ಜಾತಿಗಣತಿ ವರದಿಗೆ ಒಕ್ಕಲಿಗ, ಲಿಂಗಾಯತರಿಂದ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಜಾತಿಗಣತಿ ವರದಿ ಬರಬೇಕು. ಕ್ಯಾಬಿನೆಟ್ ನಲ್ಲಿ ಮಂಡಿಸಬೇಕು, ಎರಡು ಸದನದಲ್ಲಿ ಪರ ವಿರೋಧ ಚರ್ಚೆಯಾಗಬೇಕು ಆವಾಗ ನೋಡೋಣ ಎಂದು ಹೇಳಿದರು.
ಒಂದು ವೇಳೆ ಜಾತಿ ಗಣತಿಯಲ್ಲಿ ತಪ್ಪಿದ್ರೆ ಮತ್ತೊಮ್ಮೆ ಮಾಡಿಸಲಿ ಎಂದು ಹೇಳಿದ ಅವರು, ವರದಿ ಬಗ್ಗೆ ಸಾರ್ವಜನಿಕ ಚರ್ಚೆ ಆಗಲಿ, ಲಿಂಗಾಯತ, ಒಕ್ಕಲಿಗರಿಗೆ ಆತಂಕ ಇರಬಹುದು, ಒಳಪಂಗಡಗಳನ್ನು ಬಿಟ್ಟಿದ್ದಾರೆ ಎಂಬ ಆತಂಕ ಇರಬಹುದು, ಇದನ್ನೆಲ್ಲಾ ವರದಿಯಲ್ಲಿ ಸೇರಿಸಬಹುದು ಎಂದು ವಿವರಿಸಿದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ಸಿಎಂ ಕರೆದ ಸಭೆಗೆ ಬಂದಿರಲಿಲ್ಲ
ಸಿಎಂ ಕರೆದ ಸಭೆಗೆ ನಾನು ಬಂದಿರಲಿಲ್ಲ. ಗೈರುಹಾಜರಾಗಿದ್ದೆ. ಅನಾರೋಗ್ಯದ ಕಾರಣ ನಾನು ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ ಸತೀಶ್ ಜಾರಕಿಹೊಳಿ, ಅದನ್ನ ಸಿಎಂ ಗಮನಕ್ಕೆ ತಂದಿದ್ದೆ. ಬರಲಿಲ್ಲ ಅಂದ ಕೂಡಲೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನಾನು ಇಲ್ಲದಿದ್ದರು ಅಲ್ಲಿನ ತೀರ್ಮಾನ ಎಲ್ಲರಿಗೂ ಅನ್ವಯವಾಗುತ್ತೆ ಎಂದರು.
ಯಾರು ಮಾತನಾಡಬಾರದು ಅನ್ನೋದು ಸರಿ ಇದೆ. ಮಾತನಾಡಿದರೆ ಸುಮ್ಮನೆ ಗೊಂದಲ ಉಂಟಾಗಿತ್ತೆ, ಈ ಗೊಂದಲ ಬಗೆಹರಿಸುವ ಉದ್ದೇಶದಿಂದ ಈ ತಾಕೀತು ಮಾಡಿದ್ದಾರೆ ಎಂದು ವಿವರಿಸಿದರು.