MANIPUR VOILENCE: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ : ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಸೇರಿ ಹತ್ತು ಜನರಿಗೆ ಗಾಯ

ಇಂಫಾಲ: ಜನಾಂಗೀಯ ಸಂಘರ್ಷದಿಂದ ಬೂದಿಮುಚ್ಚಿದ ಕೆಂಡದಂತಿದ್ದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಪೊಲೀಸರು ಸೇರಿದಂತೆ 10ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.
ಇಂಫಾಲ ಪಶ್ಚಿಮ ಜಿಲ್ಲೆಯ ಸಿಗ್ಡಾ ಮತ್ತು ಕಾಂಗ್ ಚುಪ್ ನಡುವಿನ ಹಳ್ಳಿಗಳಲ್ಲಿ ಗುಂಡು ಹಾರಿಸಲಾಗಿದೆ ಎಂದು ತಿಳಿದುಬಂದಿದ್ದು, ಗಾಯಗೊಂಡಿರುವ ಹತ್ತು ಜನರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಶಸ್ತ್ರಸಜ್ಜಿತ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಕೆಲ ಕಾಲ ಗುಂಡಿನ ಕಾಳಗ ನಡೆದಿದ್ದು, ಸ್ಥಳದಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.
ಸೈನಿಕರೊಬ್ಬರ ಸಂಬಂಧಿ ಸೇರಿದಂತೆ ನಾಲ್ವರ ಅಪಹರಣ
ಸೈನಿಕರೊಬ್ಬರ ಸಂಬಂಧಿಯೊಬ್ಬರನ್ನು ಅಪಹರಿಸಲಾಗಿದೆ ಎಂಬ ಸುದ್ದಿ ಮಣಿಪುರದಲ್ಲಿ ಹರಡಿದ್ದು, ಇದರಿಂದಾಗಿ ಕುಕಿ ಉಗ್ರರು ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನೊಂದು ಘಟನೆಯಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಹಾಗೂ ಓರ್ವ 65 ವರ್ಷದ ವ್ಯಕ್ತಿಯನ್ನು ಉಗ್ರುರು ಅಪಹರಿಸಿದ್ದಾರೆ. ಇವರಲ್ಲಿ ಒಬ್ಬರನ್ನು ಭದ್ರತಾ ಪಡೆ ಯೋಧರು ರಕ್ಷಿಸಿದ್ದಾರೆ. ಉಳಿದ ನಾಲ್ವರು ಅಪಹೃತರ ಸುಳಿವು ಇದುವರೆಗೂ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

More News