Minister Shoed by Bodyguard: ಅಂಗರಕ್ಷಕನಿಂದ ಶೂ ಹಾಕಿಸಿಕೊಂಡ ಸಚಿವ!: ಎಚ್ ಸಿ ಮಹದೇವಪ್ಪ ನಡೆಗೆ ವ್ಯಾಪಕ ವಿರೋಧ

ಧಾರವಾಡ: ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹದೇವಪ್ಪ ಅವರು ತಮ್ಮ ಅಂಗರಕ್ಷಕನಿಂದ ಶೂ ಹಾಕಿಸಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ.ಸಚಿವ ಎಚ್ ಸಿ ಮಹದೇವಪ್ಪ ಅವರ ಅಂಗರಕ್ಷಕ ಕಾಲ ಬಳಿ ಕುಳಿತು ಶೂ ಹಾಕುತ್ತಿರುವ ವಿಡಿಯೋ ಹಾಗು ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಅಧಿಕಾರದಲ್ಲಿ ಇರುವವರು ಏನು ಬೇಕಾದರೂ ಮಾಡಬಹುದೇ ಎಂಬ ಪ್ರಶ್ನೆಯನ್ನು ಜನರು ಎತ್ತುತ್ತಿದ್ದಾರೆ. ಜನಪ್ರತಿನಿಧಿಯಾಗಿ ಅಧಿಕಾರದ ದರ್ಪದಿಂದ ಈ ರೀತಿ ನಡೆದುಕೊಂಡಿದ್ದಾರೆ. ಇದು ಅಮಾನವೀಯ ಘಟನೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಧಾರವಾಡ ಸಪ್ತಾಪುರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಸಚಿವ ಎಚ್ ಸಿ ಮಹದೇವಪ್ಪ, ಅಲ್ಲಿನ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಹಾಸ್ಟೆಲ್ ಊಟದ ವ್ಯವಸ್ಥೆ ಬಗ್ಗೆಯೂ ವಿದ್ಯಾರ್ಥಿಗಳ ಬಳಿ ವಿಚಾರಿಸಿದ ಅವರು, ವಿದ್ಯಾರ್ಥಿಗಳಿಂದ ಅಹವಾಲು ಕೂಡ ಸ್ವೀಕರಿಸಿದರು. ಹಾಸ್ಟೆಲ್‌ಗೆ ಭೇಟಿ ನೀಡಿ ಎಲ್ಲವನ್ನೂ ಪರಿಶೀಲಿಸಿದ ನಂತರ ವಾಪಸ್ ಹೋಗುತ್ತಿದ್ದ ಸಂದರ್ಭದಲ್ಲಿ ಸಚಿವ ಮಹಾದೇವಪ್ಪ ಶೂ ಲೇಸ್ ಬಿಚ್ಚಿದೆ.. ಅದನ್ನೂ ನೋಡಿಯೂ ಸಚಿವರು ಸುಮ್ಮನಿದ್ದರು..! ಸಚಿವರ ಶೂ ಲೇಸ್ ಬಿಚ್ಚಿದ್ದನ್ನು ನೋಡಿದ ಅವರ ಅಂಗರಕ್ಷಕ ಲೇಸ್ ಕಟ್ಟಿದ್ದಾರೆ.

ಅಂಗರಕ್ಷಕ ಶೂ ಹಾಕಲು ಮುಂದಾದರೂ ಸಚಿವರು ಯಾವುದೇ ವಿರೋಧವನ್ನು ವ್ಯಕ್ತಪಡಿಸಿದೇ ಶೂ ಹಾಕಿಸಿಕೊಂಡಿದ್ದಾರೆ..! ಘಟನೆ ನಡೆಯುತ್ತಿದ್ದಂತೇ ಸ್ಥಳದಲ್ಲಿದ್ದವರೇ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಆದರೂ ಸಚಿವರಿಗೆ ತಮ್ಮ ನಡತೆ ಬಗ್ಗೆ ಕಿಂಚಿಂತೂ ಬೇಸರವಾಗಲಿಲ್ಲ. ತಮ್ಮ ಅಂಗರಕ್ಷಕ ನಿಂದ ಶೂ ಹಾಕಿಸಿಕೊಳ್ಳುವುದು ಸಾಮಾನ್ಯ ಸಂಗತಿ ಎಂಬಂತೆ ವರ್ತಿಸಿದ್ದಾರೆ. ಇದೀಗ ಈ ವಿಚಾರ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

More News