ನವದೆಹಲಿ : 2018 ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಮಾನದಂತೆ 24 ಟಿಎಂಸಿ ನೀರು ಬೆಂಗಳೂರಿಗೆ ಸೀಮಿತದ ಹಿನ್ನೆಲೆಯಲ್ಲಿ ನಾವು ಮೇಕೆದಾಟು ಯೋಜನೆಯನ್ನು ಶುರು ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ನವದೆಹಲಿ ಪ್ರವಾಸದಲ್ಲಿರುವ ಡಿ ಕೆ ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ಈಗಾಗಲೇ ಸರ್ಕಾರಿ ಆದೇಶ ಜಾರಿ ಮಾಡಲಾಗಿದ್ದು, ಅದಕ್ಕಾಗಿ ತಯಾರಿ ನಡೆಸುತ್ತಿದ್ದೇವೆ ಎಂದ ವಿವರಿಸಿದರು.
ಸಚಿವರ ಭೇಟಿಗೆ ಪ್ರತಿ ಶಾಸಕರಿಗೆ ಟೈಮ್ ಫಿಕ್ಸ್
ಸಚಿವರ ಭೇಟಿಗೆ ಪ್ರತಿ ಶಾಸಕರಿಗೆ ಅವಕಾಶ ಸಿಗುತ್ತಿಲ್ಲ ಎಂಬ ವಿಚಾರದ ಹಿನ್ನೆಲೆಯಲ್ಲಿ ಎಲ್ಲಾ ಶಾಸಕರಿಗೆ ಭೇಟಿಗೆ ಟೈಮ್ ಫಿಕ್ಸ್ ಮಾಡಲಾಗಿದೆ. ಅದರಂತೆಯೇ ಅವರು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಎಲ್ಲಾ ಶಾಸಕರಿಗೂ ಸ್ವಲ್ಪ ಟೈಂ ಗೊಂದಲವಿತ್ತು, ಅದಕ್ಕೆ ಪ್ರತಿ ಶಾಸಕರಿಗೆ ಸಮಯ ಫಿಕ್ಸ್ ಮಾಡಲಾಗಿದೆ, 10ರಿಂದ 10.30 ರವರೆಗೆ ಸಮಯ ನೀಡಲಾಗಿದೆ. ಆದಾದ ಬಳಿಕ ನಮ್ಮ ಕಾರ್ಯಕರ್ತರಿಗೂ ಟೈಂ ನೀಡುತ್ತೇವೆ, ಕ್ಷೇತ್ರದ ಕೆಲಸದ ಬಗ್ಗೆ ಚರ್ಚೆ ಮಾಡಬಹುದಾಗಿದೆ ಎಂದು ವಿವರಿಸಿದರು.

ಮೂರು ನಾಲ್ಕು ವರ್ಷ ಕಾರ್ಯಾಧ್ಯಕ್ಷರಾಗಿದ್ದವರ ಬದಲಾವಣೆ
ರಾಜ್ಯದಲ್ಲಿ ಕಾರ್ಯಾಧ್ಯಕ್ಷರ ಬದಲಾವಣೆ ಆಗಬೇಕು ಎಂಬ ವಿಚಾರ ಸಂಬಂಧ ಮಾತನಾಡಿದ ಅವರು, 3 ಅಥವಾ 4 ವರ್ಷ ಅವಧಿ ಅಧಿಕಾರದಲ್ಲಿದ್ದವರನ್ನು ಬದಲಾವಣೆ ಮಾಡಬೇಕು, ಹೊಸ ಆಯ್ಕೆ ಬಗ್ಗೆ ಪ್ರಪೋಸಲ್ ಕೊಡಲು ಹೇಳಿದ್ದೇವೆ, ಸಚಿವರು ಜಿಲ್ಲೆಗೆ ತೆರಳಿ ಕೊಡಲು ಹೇಳಿದ್ದೇವೆ, ಆ ವರದಿ ಬಂದ ಬಳಿಕ ಬದಲಾವಣೆಯಾಗಲಿದೆ ಎಂದರು.
ಮುನಿರತ್ನ ಕ್ಷೇತ್ರಕ್ಕೆ ಬಿಎಸ್ ವೈ ಭೇಟಿ
ಮುನಿರತ್ನ ಅವರ ಕ್ಷೇತ್ರವಾದ ರಾಜರಾಜೇಶ್ವರಿನಗರಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಭೇಟಿ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಹಳ ಸಂತೋಷ ಅವರು ಹೋಗಬೇಕು, ಅವರಿಗೆ ಲೋಕಾಯುಕ್ತ ರಿಪೋರ್ಟ್ ಎಲ್ಲಾ ಕಳಿಸಿಕೊಡ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದರು.




