ಮುಂಬೈ: ಪ್ರಸಕ್ತ ಸಾಲಿನ ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಅತ್ಯಂತ ಯಶಸ್ವಿ ಬೌಲರ್ ಗಳಲ್ಲಿ ಭಾರತೀಯ ಕ್ರಿಕೆಟ್ ತಂಡ ಬೌಲರ್ ಮೊಹಮ್ಮದ್ ಶಮಿ ಕೂಡ ಒಬ್ಬರು. ಅವರು ಆಡಿದ ನಾಲ್ಕೇ ನಾಲ್ಕು ಪಂದ್ಯಗಳಲ್ಲಿ 16 ವಿಕೆಟ್ ಪಡೆದಿದ್ದಾರೆ. ಎದುರಾಳಿ ಬ್ಯಾಟರ್ ಗಳನ್ನು ತಮ್ಮ ಲೈನ್ ಅಂಡ್ ಲೆನ್ತ್ ಬೌಲಿಂಗ್ ನಿಂದ ಕಟ್ಟಿಹಾಕಲು ಯಶಸ್ವಿಯಾಗಿದ್ದಾರೆ.
ಇದರ ನಡುವೆ ಅವರಿಗೆ ಒಂದು ಮದುವೆ ಆಫರ್ ಬಂದಿದೆ. ಸಾಮಾಜಿಕ ಜಾಲತಾಣ ಟ್ವೀಟ್ ಮೂಲಕ ಬಾಲಿವುಡ್ ನಟಿ ಪಾಯಲ್ ಘೋಷ್, ಶಮಿ ಅವರನ್ನು ಮದುವೆಯಾಗಲು ಸಿದ್ದ ಎಂಬ ಆಫರ್ ನೀಡಿದ್ದಾರೆ.
ಶಮಿ ನಿಮ್ಮ ಇಂಗ್ಲೀಷ್ ಭಾಷೆಯಲ್ಲಿ ಸುಧಾರಣೆ ತನ್ನಿ ನಾನು ನಿಮ್ಮನ್ನು ಮದುವೆಯಾಗಲು ಸಿದ್ದ ಎಂದು ಬರೆದುಕೊಂಡಿದ್ದಾರೆ. ಪಾಯಲ್ ಅವರ ಈ ಆಫರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
1992ರಲ್ಲಿ ಕೋಲ್ಕತ್ತಾದಲ್ಲಿ ಜನಿಸಿರುವ ಪಾಯಲ್ ಘೋಷ್, ಸ್ಕಾಟಿಷ್ ಚರ್ಚ್ ಕಾಲೇಜಿನಿಂದ ರಾಜಕೀಯ ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ವರ್ಷಧಾರೆ, ಮಿ.ರಾಸ್ಕಲ್, ಊಸರವೇಲಿ, ಪಟೇಲ್ ಕಿ ಪಂಜಾಬಿ ಶಾದಿ ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಮೊಹಮ್ಮದ್ ಶಮಿ ಅವರು 2014ರಲ್ಲಿ ಹಸಿನ್ ಜಹಾನ್ ಎಂಬುವವರನ್ನು ಮದುವೆಯಾಗಿದ್ದರು. 2015ರಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಆದರೆ, ಅವರ ಪತ್ನಿ ಶಮಿ ವಿರುದ್ಧ ಕೌಟುಂಬಿಕ ಹಿಂಸಾಚಾರ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಿದ್ದರು. ಇದರಿಂದ ಶಮಿ ಕೆಲ ಸಮಯ ಮಾನಸಿಕವಾಗಿ ಜರ್ಜರಿತರಾಗಿದ್ದರು.
ಪಾಯಲ್ ಘೋಷ್ ಅವರ ಈ ಆಫರ್ ಗೆ ಶಮಿ ಅವರು ಯಾವ ರೀತಿಯಲ್ಲಿ ಉತ್ತರ ನೀಡುತ್ತಾರೋ ಕಾದುನೋಡಬೇಕಾಗಿದೆ. ನಾಳೆ ಅವರು ನೆದರ್ ಲ್ಯಾಂಡ್ ತಂಡದ ವಿರುದ್ಧ ಬೆಂಗಳೂರಿನಲ್ಲಿ ಪಂದ್ಯ ಆಡಲಿದ್ದಾರೆ. ಅವರ ಅಮೋಘ ಪ್ರದರ್ಶನ ಮುಂದುವರೆದು ಭಾರತ ತಂಡ ಕಪ್ ಜಯಿಸುವಂತಾಗಲಿ ಎಂಬುದು ಅನೇಕ ಅಭಿಲಾಷೆಯಾಗಿದೆ.




