DROUGHT STUDY WITHOUT GETTING OUT OF THE VEHICLE: ಬಿಜೆಪಿ – ಜೆಡಿಎಸ್ ಬರ ಅಧ್ಯಯನ ಎಂಬ ನಾಟಕ: ಬಿಎಸ್ ವೈಗೆ ಸೆಕ್ಯೂರಿಟಿ ಕೊಟ್ಟು ಬಂಧನದಲ್ಲಿರಿಸಿದ್ದೀರ: ಲಕ್ಷ್ಮಣ್ ಗಂಭೀರ ಆರೋಪ

ಬೆಂಗಳೂರು : ಬಿಜೆಪಿ ಹಾಗೂ ಜೆಡಿಎಸ್ ಬರ ಅಧ್ಯಯನ ಎಂಬ ಹೊಸ ನಾಟಕ ಶುರು ಮಾಡಿದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ತಮ್ಮ ಮಗ‌ನ ಅಸ್ತಿತ್ವಕ್ಕಾಗಿ ಅಧ್ಯಯನಕ್ಕೆ ಹೊರಟಿದ್ದಾರೆ, ಅವರು ತುಮಕೂರು ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದಾರೆ, ಅಲ್ಲಿ ರೈತರ ಜೊತೆ ಎಷ್ಟು ಸಮಯ ಕಳೆದ್ರು, ಯಾವ್ಯಾವ ಅಧಿಕಾರಿಗಳ ಜೊತೆ ಮಾತನಾಡಿದ್ರು ಎನ್ನುವ ಮಾಹಿತಿ ಒದಗಿಸಬೇಕು ಎಂದು ಆಗ್ರಹಿಸಿದರು.
ಕೆಲವು ಕಡೆ ಕಾರಿನಿಂದ ಯಡಿಯೂರಪ್ಪ ಅವರು ಕೆಳಗೆ ಇಳಿಯಲೇ ಇಲ್ಲ ಎಂದು ಆರೋಪಿಸಿದ ಅವರು, ಕಾಟಾಚಾರಕ್ಕೆ ಬರ ಅಧ್ಯಯನ ಮಾಡಿದ್ದಾರೆ, ನಾವು ಇದ್ದೇವೆ ಅನ್ನೋದನ್ನ‌ ತೋರಿಸಲು ಬರ ಅಧ್ಯಯನ ಮಾಡಿದ್ದಾರೆ ಎಂದು ಆರೋಪಿಸಿದರು.
25 ಬಿಜೆಪಿ ಸಂಸದರನ್ನ ರಾಜ್ಯದ ಮತದಾರರು ಆಯ್ಕೆ ಮಾಡಿದ್ದಾರೆ, ಯಾವತ್ತಾದ್ರೂ‌ ಮೋದಿಯವರನ್ನ ಭೇಟಿ ಮಾಡಿದ್ದಾರಾ? ಪ್ರಧಾನಿ ಮೋದಿ ಮನೆಗೂ ಭೇಟಿ ಕೊಡಲಾಗ್ತಿಲ್ಲ, ಸಿಎಂ ಜೊತೆ ಒಂದು ನಿಮಿಷ ಚರ್ಚೆ ಮಾಡಿದ್ದೀರ, ರಾಜ್ಯ ಸರ್ಕಾರದ ವಿರುದ್ಧ ಸ್ಟೇಟ್ ಮೆಂಟ್ ಕೊಡುತ್ತಿದ್ದಾರೆ, ಎಲ್ಲಿ ಹೋಗಿದ್ದಾರೆ ಬಿಜೆಪಿಯ 25 ಎಂಪಿಗಳು ಎಂದು ಬಿಜೆಪಿಯನ್ನು ಪ್ರಶ್ನಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಮುಖಂಡರು ಕೇವಲ ಭಾವನಾತ್ಮಕವಾಗಿ ಮಾತನಾಡೋದಷ್ಟೇ ಇವರ ಕೆಲಸವಾಗಿದೆ, ಪ್ರತಿನಿತ್ಯ ಸರ್ಕಾರ ಬೀಳಿಸುತ್ತೇವೆ ಅಂತಾರೆ, ಎಲ್ಲಿ ಸರ್ಕಾರವನ್ನ ಇವರು ಬೀಳಿಸುತ್ತಾರೆ, ಇವರು 50 ಶಾಸಕರನ್ನ ಕೊಂಡುಕೊಳ್ಳಬೇಕು, ಅಷ್ಟು ಶಾಸಕರನ್ನ ಕೊಳ್ಳೋಕೆ ಸಾಧ್ಯವೇ, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲಿಂದಲೇ ಇತ್ತಕಡೆ ಶಾಸಕರು ಬರ್ತಿದ್ದಾರೆ, ಅವರನ್ನ ಕಾಪಾಡಿಕೊಳ್ಳೋಕೆ ಕೆಲವರು ಹಾಸನಕ್ಕೆ ಹೋಗಿದ್ದಾರೆ ಎಂದು ಜೆಡಿಎಸ್ ವಿರುದ್ಧವೂ ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ತೆರಿಗೆ ರೂಪದಲ್ಲಿ ಸಂಗ್ರಹವಾಗಿರುವ ಹಣ ಎಷ್ಟು, ರಾಜ್ಯಕ್ಕೆ ವಾಪಸ್ ಎಷ್ಟು ಕೊಟ್ಟಿದ್ದೀರಾ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ ಅವರು, 4.7 ಲಕ್ಷ ಕೋಟಿ ಹಣ ಸಂಗ್ರಹವಾಗುತ್ತದೆ, ಇದರಲ್ಲಿ ವಾಪಸ್ ಎಷ್ಟು ಹಣ ಕೊಟ್ಟಿದ್ದೀರ ಎಂದು ಪ್ರಶ್ನಿಸಿದರು.
ಹಿರಿಯ ನಾಯಕರನ್ನು ಮನೆಗೆ ಕಳುಹಿಸಿದ ಪಾರ್ಟಿ ಬಿಜೆಪಿ
ಸಂಸದ ಸದಾನಂದಗೌಡರನ್ನ ಮನೆಗೆ ಕಳಿಸಿಸಿದ್ದಾರೆ, ಜಗದೀಶ್ ಶೆಟ್ಟರ್ ಗೆ ಟಿಕೆಟ್ ಕೊಟ್ಟಿರಲಿಲ್ಲ, ಲಕ್ಷ್ಮಣ ಸವದಿಯ ಅವರನ್ನ ಮೂಲೆಗೆ ತಳ್ಳಿದ್ದರು. ಸಿ.ಟಿ.ರವಿ ಸೆಕ್ರಟರಿ ಪೋಸ್ಟೇ ಕಿತ್ತುಕೊಂಡಿರುವ ಬಿಜೆಪಿಯಲ್ಲಿ ಹಿರಿಯ ನಾಯಕರನ್ನು ಮನೆಗೆ ಕಳುಹಿಸುವ ಕೆಲಸವಾಗುತ್ತಿದೆ ಎಂದು ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಜಡ್ ಪ್ಲಸ್ ಸೆಕ್ಯೂರಿಟಿ ಯಾಕೆ ಕೊಟ್ರಿ ಎಂದು ಪ್ರಶ್ನಿಸಿದ ಅವರು, ಇದು ಅವರ ಸೆಕ್ಯೂರಿಟಿ ಅಲ್ಲ, ಸೆಕ್ಯೂರಿಟಿ ಕೊಟ್ಟು ಅವರನ್ನ ಬಂಧನದಲ್ಲಿರಿಸಿದ್ದೀರ, ನಿನ್ನೆಯಿಂದ ಅವರ ಊಟ ಚೆಕ್ ಮಾಡುತ್ತಿದ್ದಾರೆ, ಈಗ ಯಡಿಯೂರಪ್ಪ ಏನ್ಮಾಡ್ತಾರೋ ಅಂತ ಸೆಕ್ಯೂರಿಟಿ ಇಟ್ಟಿದ್ದಾರೆ ಎಂದು ಲಕ್ಷ್ಮಣ್ ಆರೋಪಿಸಿದರು.

More News