ಬೆಂಗಳೂರು: ಕೆಇಎ ಪರೀಕ್ಷೆ ಹಗರಣದ ಕಿಂಗ್ ಪಿನ್ ಆರ್ ಡಿ ಪಾಟೀಲ್ ನ ಎಡೆ ಮುರಿ ಕಟ್ಟಿದ್ದು, ಹಗರಣದ ಹೆಚ್ಚಿನ ತನಿಖೆಗೆ ಪ್ರಕರಣವನ್ನು ಸಿಬಿಐಗೆ ವಹಿಸಲು ನಿರ್ಧರಿಸಿದೆ.
ಅ. 29ರಂದು ನಡೆದಿದ್ದ ಕೆಇಎ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಾಪಿ ಹೊಡೆಯುವ ಜಾಲವೊಂದನ್ನು ರೂಪಿಸಿದ್ದ ಆರ್.ಡಿ. ಪಾಟೀಲ್ ನನ್ನು ನಿನ್ನೆ ಕಲಬುರಗಿ ಪೊಲೀಸರು ಸೆರೆ ಹಿಡಿದಿದ್ದಾರೆ. ಕಳೆದ 12 ದಿನಗಳಿಂದ ತಲೆಮರೆಸಿಕೊಂಡಿದ್ದ ಪಾಟೀಲ್ ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ನಾಲ್ಕು ದಿನಗಳ ಹಿಂದೆ, ಆತ ಕಲಬುರಗಿಯಲ್ಲೇ ವಾಸವಾಗಿದ್ದ ಅಪಾರ್ಟ ಮೆಂಟ್ ಗೆ ದಾಳಿ ನಡೆಸಿದ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ಕಲಬುರಗಿ ಪೊಲೀಸರು ಹಾಗೂ ಸರ್ಕಾರಕ್ಕೆ ತೀವ್ರ ಮುಖಭಂಗವುಂಟುಮಾಡಿದ್ದ ಹಗರಣದ ಕಿಂಗ್ ಪಿನ್ ನ್ನ ಕೊನೆಗೂ ಅರೆಸ್ಟ್ ಮಾಡಲಾಗಿದೆ.
ತಂತ್ರಜ್ಞಾನ ವಿಚಾರದಲ್ಲಿ ಸಾಕಷ್ಟು ಪರಿಣಿತಿ ಸಾಧಿಸಿದ್ದ ಆರ್ ಡಿ ಪಾಟೀಲ್, ಪರೀಕ್ಷಾ ಅಕ್ರಮ ಎಸಗಲೆಂದೇ ಹೊಸ ಮೊಬೈಲ್ ನ್ನ ಖರೀದಿಸಿದ್ದ ಎಂಬ ಮಾಹಿತಿ ತನಿಖೆಯಲ್ಲಿ ತಿಳಿದು ಬಂದಿದೆ. ಸಿಮ್ ಕಾರ್ಡ್ ಹಾಕದೆಯೇ ಕೇವಲ ವೈಫೈ ಬಳಸಿಕೊಂಡು ಆತ ಪರೀಕ್ಷಾ ಅಕ್ರಮಗಳಿಗೆ ಮುಂದಾಗಿದ್ದ ಎಂಬ ಬಗ್ಗೆ ಕೂಡ ಮಾಹಿತಿ ಲಭ್ಯವಿದ್ದು, ಈತನೊಂದಿಗೆ ಯಾವ ತಂಡ ಕಾರ್ಯನಿರ್ವಹಿಸುತ್ತಿತ್ತು ಎಂಬ ಮಾಹಿತಿ ಕಲೆ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ, ಸಿಐಡಿಗೆ ವಹಿಸಲು ಮುಂದಾಗಿದೆ.
ಕಿಂಗ್ ಪಿನ್ ಆರ್. ಡಿ ಪಾಟೀಲ್ ಬಂಧನ ವಿಚಾರದ ಕುರಿತು ಮಾಹಿತಿ ನೀಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು, ಹಗರಣದ ಕೆಲಸದಲ್ಲಿ ಎರಡು ಮೂರು ಟೀಮ್ ಒಟ್ಟಿಗೆ ಕೆಲಸ ಮಾಡಿವೆ. ಇಲಾಖೆಯವರು ಅವನನ್ನ ಹಿಡಿದಿದ್ದಾರೆ.
ಇಲಾಖೆಯವರಿಗೆ ಅಭಿನಂದನೆಗಳು. ಯಾಕೆಂದರೆ ಒಳ್ಳೆಯ ಕೆಲಸ ತ್ವರಿತವಾಗಿ ಮಾಡಿದ್ದಾರೆ. ಬಹಳಷ್ಟು ಚರ್ಚೆಗಳನ್ನು ನಾವು ಮಾಡಿದ್ದೇವೆ.ಪಿಎಸ್ಐ, ಈಗಿನ ಪರೀಕ್ಷೆ ಸೇರಿ ೫.೬ ಕೇಸುಗಳು ಅವರ ಮೇಲಿದೆ.
ಇದನ್ನು ಸಿಐಡಿಗೆ ಒಪ್ಪಿಸಬೇಕೆಂಬ ಚರ್ಚೆ ಮಾಡಿದ್ದೇವೆ.
ತನಿಖೆ ಮಾಡಲು ಸಿಐಡಿಗೆ ಕೊಡುತ್ತೇವೆ ಎಂದು
ಗೃಹ ಸಚಿವ ಪರಮೇಶ್ವರ್ ತಿಳಿಸಿದರು.




