ಬೆಂಗಳೂರು: ಇಂದು ರಾಜ್ಯ ಬಿಜೆಪಿಯ 11ನೇ ಅಧ್ಯಕ್ಷರಾಗಿ ವಿಜಯೇಂದ್ರ ಪದಗ್ರಹಣ ಮಾಡಲಿದ್ದಾರೆ. ಬೆಳಗ್ಗೆ 10ಗಂಟೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ.
ಬೆಳಗ್ಗೆ 9:30ಕ್ಕೆ ಬಿಜೆಪಿ ಕಚೇರಿಗೆ ಬಿ.ವೈ ವಿಜಯೇಂದ್ರ ಆಗಮಿಸಲಿದ್ದಾರೆ. 10 ಗಂಟೆಗೆ ಪೂರ್ಣಾಹುತಿ ಹೋಮದಲ್ಲಿ ವಿಜಯೇಂದ್ರ ಮತ್ತು ನಳೀನ್ ಕುಮಾರ್ ಕಟೀಲ್ ಭಾಗಿಯಾಗಲಿದ್ದಾರೆ. ಬಳಿಕ 10:30ಕ್ಕೆ ಕಟೀಲ್ ಅವರಿಂದ ಬಿಜೆಪಿ ಅಧ್ಯಕ್ಷ ಅಧಿಕಾರ ಹಸ್ತಾಂತರ ಮಾಡಲಾಗುತ್ತದೆ. ನಂತರ 11:30 ಕ್ಕೆ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಸುದ್ದಿ ಗೋಷ್ಠಿ ನಡೆಲಿದ್ದಾರೆ. ಸುದ್ದಿಗೋಷ್ಠಿ ನಂತರ ಶಾಸಕರು, ಹಿರಿಯ ನಾಯಕರ ಜೊತೆ ಕೆಲ ಕಾಲ ವಿಜಯೇಂದ್ರ ಮಾತುಕತೆ ನಡೆಸಲಿದ್ದಾರೆ.
ಇನ್ನು ಇಂದು ನಡೆಯಲಿರುವ ಪದಗ್ರಹಣ ಕಾರ್ಯಕ್ರಮಕ್ಕೆ ಬಿಜೆಪಿಯ ಅಸಮಧಾನಿತ ಕೆಲ ನಾಯಕರು ಗೈರಾಗುವ ಸಾಧ್ಯತೆಯಿದೆ ದಟ್ಟವಾಗಿದೆ. ಇಂದು ಬೆಳಗ್ಗೆ 10:35ಕ್ಕೆ ಬಿಜೆಪಿ ನಾಯಕ ಎಸ್ ಟಿ ಸೋಮಶೇಖರ್ ಕುಂಬಳಗೋಡು ಪೊಲೀಸ್ ಸ್ಟೇಷನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಪರಮೇಶ್ವರ್, ರಾಮಲಿಂಗಾ ರೆಡ್ಡಿ ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಬಿಜೆಪಿ ಕಾರ್ಯ ಕ್ರಮ ವೇಳೆಯೇ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಭಾಗಿಯಾಗಲು ಮುಂದಾಗಿರುವುದು ಬಹಳಷ್ಟು ಚರ್ಚೆಗೆ ಗ್ರಾಮವಾಗಿದೆ. ಇವರ ಜೊತೆಗೆ ಈಗಾಗಲೇ ಅಧ್ಯಕ್ಷ ಪಟ್ಟ ಸಿಗದೇ ಅಸಮಧಾನ ಗೊಂಡಿರುವ ಸಿ.ಟಿ ರವಿ, ಬಸನಗೌಡ ಪಾಟೀಲ್ ಯತ್ನಾಳ್, ವಿ ಸೋಮಣ್ಣ, ಅರವಿಂದ ಬೆಲ್ಲದ್, ಅರವಿಂದ ಲಿಂಬಾವಳಿ, ಡಾ.ಕೆ ಸುಧಾಕರ್, ಸುನೀಲ್ ಕುಮಾರ್ ಗೈರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.