ಬೆಂಗಳೂರು: ನವೆಂಬರ್ ನಲ್ಲಿ ನಡೆಯುವ ಕೆಇಎ ಪರೀಕ್ಷೆಗಳಿಗೆ ಬಾಯಿ, ಕಿವಿ ಹಾಗೂ ತಲೆ ಮುಚ್ಚುವ ವಸ್ತ್ರ, ಮೆಟಲ್ ಗಳನ್ನ ಧರಿಸಿಕೊಂಡು ಬರುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿದ ಕೆಇ ಎ ಬೋರ್ಡ್ ಇದೀಗ ತನ್ನ ಹೇಳಿಕೆಗಳಲ್ಲಿ ಬದಲಾವಣೆ ತಂದಿದ್ದು, ಹಿಜಾಬ್, ತಾಳಿ ಮತ್ತು ಕಾಲು ಉಂಗುರ ಹಾಕಿಕೊಂಡು ಬಂದರೆ ಸಮಸ್ಯೆ ಇಲ್ಲ. ಆದ್ರೆ ಕಡ್ಡಾಯವಾಗಿ ಅಂಥ ಅಭ್ಯರ್ಥಿ ಗಳು ಪರಿಶೀಲನೆ ಗೆ ಒಳಪಡುತ್ತಾರೆ ಎಂದು ತಿಳಿಸಿದೆ.
ನವೆಂಬರ್ 18 ಮತ್ತು 19 ರಂದು ವಿವಿಧ ನಿಗಮ ಮಂಡಳಿಗಳಿಗಳಿಗೆ ನೇಮಕಾತಿ ಪರೀಕ್ಷೆ ನಡೆಯಲಿದೆ. ಹೀಗಾಗಿ ಪರೀಕ್ಷಾ ವೇಳೆ ಅಕ್ರಮವನ್ನ ತಡೆಗಟ್ಟುವ ನಿಟ್ಟಿನಲ್ಲಿ ನಿನ್ನೆ ಅಷ್ಟೇ ಕೆಇಎ ಬೋರ್ಡ್ ಕೆಲ ಮಾರ್ಗಸೂಚಿಗಳನ್ನ ಪ್ರಕಟಿಸಿತ್ತು. ತಲೆ ಮುಚ್ಚುವ ವಸ್ತ್ರ ಸೇರಿದಂತೆ ದೇಹದಲ್ಲಿ ಯಾವುದೇ ಮೆಟಲ್ ಬಳಸಿರಬಾರದೆಂದು ಒಂದಿಷ್ಟು ಕಟ್ಟುನಿಟ್ಟಿನ ಆದೇಶ ಪ್ರಕಟಿಸಿತ್ತು.
ಕೆಇಎ ಆದೇಶದಿಂದ ಮುಸ್ಲಿಂ ಅಭ್ಯರ್ಥಿ ಸೇರಿದಂತೆ ವಿವಾಹಿತ ಮಹಿಳೆಯರಿಗೆ ಒಂದಷ್ಟು ಗೊಂದಲಗಳು ಏರ್ಪಟ್ಟ ಸಂದರ್ಭ ಎದುರಾಯಿತು. ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತೊಂದು ಸುತ್ತೋಲೆ ಹೊರಡಿಸಿದ್ದು, ಈ ಹಿಂದಿನಂತೆ ಪರೀಕ್ಷಾ ಕೊಠಡಿಯೊಳಗೆ ಹಿಜಾಬ್ಗೆ, ತಾಳಿ, ಕಾಲುಂಗುರಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.
ತಲೆ ಹೊದಿಕೆಯನ್ನು ಧರಿಸಿಕೊಂಡು ಬರುವ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮುಂಚೆ ಬರಬೇಕು. ಕೇಂದ್ರದಲ್ಲಿ ಸಂಪೂರ್ಣ ಪರೀಕ್ಷೆ ಮಾಡಿದ ನಂತರವೇ ಕೊಠಡಿಯೊಳಗಡೆ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಸ್ಪಷ್ಟನೆ ನೀಡಿದ್ದಾರೆ.
ಅಲ್ಲದೇ ಇತ್ತ ಹಿಂದೂ ಅಭ್ಯರ್ಥಿಗಳು ತಾಳಿ ಮತ್ತು ಕಾಲುಂಗುರಗಳನ್ನು ಪರೀಕ್ಷಾ ಕೊಠಡಿಗಳಿಗೆ ನಿಷೇಧಿಸಿದಕ್ಕೆ ಬಲಪಂಥಿಯ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತ ಕೆಇಎ ತಾಳಿ ಮತ್ತು ಕಾಲುಂಗರಗಳನ್ನು ಹೊರತುಪಡಿಸಿ ಮಹಿಳೆಯರು ಯಾವುದೇ ಆಭರಣಗಳನ್ನು ಧರಿಸುವಂತಿಲ್ಲ. ಪರೀಕ್ಷಾ ಸಭಾಂಗಣಗಳಲ್ಲಿ ಬ್ಲೂಟೂತ್ ಸಾಧನಗಳ ಬಳಕೆಯನ್ನು ತಡೆಗಟ್ಟುವ ಸಲುವಾಗಿ, ಕ್ಯಾಪ್ಗಳು ಅಥವಾ ಬಾಯಿ, ಕಿವಿ ಮತ್ತು ತಲೆಯನ್ನು ಮುಚ್ಚುವ ಬಟ್ಟೆ ಅಥವಾ ವಸ್ತುಗಳನ್ನು ನಿಷೇಧಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.




