ಮುಂಬೈ: ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುವ ಏಕದಿನ ವಿಶ್ವಕಪ್ ಟೂರ್ನಿ ಉಪಾಂತ್ಯ ತಲುಪಿದ್ದು, ಇಂದು ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಜಿದ್ದಾಜಿದ್ದಿನ ಕಾದಾಟ ನಡೆಸಲು ಸಜ್ಜಾಗಿವೆ. ಉಭಯ ತಂಡಗಳ ರೋಚಕ ಕದನಕ್ಕೆ ಮುಂಬೈನ ಐತಿಹಾಸಿಕ ವಾಂಖೆಡೆ ಮೈದಾನದಲ್ಲಿ ವೇದಿಕೆ ತಯಾರಾಗಿದೆ.
ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಸಾರಥ್ಯದ ಟೀಂ ಇಂಡಿಯಾ ಸತತ ಗೆಲುವುಗಳೊಂದಿಗೆ ಅಜೇಯ ತಂಡವಾಗಿ ಹೊರಹೊಮ್ಮಿದ್ದರೆ. ಕೇನ್ ವಿಲಿಯಮ್ಸ್ ನೇತೃತ್ವದ ನ್ಯೂಜಿಲೆಂಡ್ ಕೂಡ ಬಲಿಷ್ಠ ತಂಡವಾಗಿ ಗುರುತಿಸಿಕೊಂಡು ಸೆಮೀಸ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಪ್ರಶಸ್ತಿ ಹೊಸ್ತಿಲಿಗೆ ಬಂದು ನಿಂತಿರುವ ಈ ಎರಡು ತಂಡಗಳು ಇಂದಿನ ಸೆಮೀಸ್ ಹಣಾಹಣಿಯಲ್ಲಿ ಗೆಲುವಿಗಾಗಿ ಪ್ರಬಲ ಹೋರಾಟ ನಡೆಸಲಿವೆ.
ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಕಿವೀಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಭಾರತ, ಇಂದಿನ ಸೆಮಿಫೈನಲ್ ಪಂದ್ಯದಲ್ಲೂ ಕೂಡ ಇದೇ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದರೆ. ಎದುರಾಳಿ ಕಿವೀಸ್ ತಂಡ ಲೀಗ್ ಹಂತದಲ್ಲಿನ ಸೋಲಿಗೆ ಸೇಡು ತೀರಿಸಿಕೊಂಡು ರೋಹಿತ್ ಪಡೆಯನ್ನ ಮಣಿಸಿ ಫೈನಲ್ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ. ಆದರೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾಕ್ಕೆ ಸೋಲಿನ ರುಚಿ ತೋರಿಸುವುದು ನ್ಯೂಜಿಲೆಂಡ್ ತಂಡಕ್ಕೆ ಅಂದುಕೊಂಡಷ್ಟು ಸುಲಭವಲ್ಲ.
ಭಾರತದ ಪರ ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಅದ್ಭುತ ಫಾರ್ಮ್ ಹೊಂದಿದ್ದರೆ. ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ ಕೂಡ ತಂಡಕ್ಕೆ ಆಸರೆಯಾಗುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನೂ ಬೌಲಿಂಗ್‌ನಲ್ಲಿ ತ್ರಿವಳಿ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ ಅವರುಗಳು ಈಗಾಗಲೇ ಟೂರ್ನಿಯಲ್ಲಿ ಎದುರಾಳಿ ತಂಡಗಳ ಬ್ಯಾಟಿಂಗ್ ಬೆನ್ನೆಲುಬು ಮುರಿದು ತಂಡದ ಗೆಲುವಿನ ಓಟದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರೆ. ಕುಲ್ದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ಕೂಡ ತಮ್ಮ ಕೈಚಳಕ ತೋರಿಸಿದ್ದಾರೆ. ಹೀಗಾಗಿ ಮಹತ್ವದ ಸೆಮೀಸ್ ಪಂದ್ಯದಲ್ಲೂ ಇದೇ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಡಲು ಸಜ್ಜಾಗಿದ್ದಾರೆ.
ಮತ್ತೊಂದೆಡೆ ನ್ಯೂಜಿಲೆಂಡ್ ತಂಡದಲ್ಲಿ ಕೂಡ ಅತ್ಯುತ್ತಮ ಆಟಗಾರರಿದ್ದು, ಟೂರ್ನಿಯಲ್ಲಿ ಈಗಾಗಲೇ ಅದ್ಬುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮುಖವಾಗಿ ಬ್ಯಾಟಿಂಗ್ ವಿಭಾಗದಲ್ಲಿ ಡೆವೋನ್ ಕಾನ್ವೆ, ರಚಿನ್ ರವೀಂದ್ರ, ನಾಯಕ ಕೇನ್ ವಿಲಿಯಮ್ಸ್, ಡೆರಿಲ್ ಮಿಚೆಲ್, ಟಾಮ್ ಲಾಥಂ, ಜಿಮ್ಮಿ ನೀಶಮ್ ಅವರುಗಳು ಬ್ಯಾಟಿಂಗ್‌ನಲ್ಲಿ ಮಿಂಚಿದ್ದರೆ. ಬೌಲಿಂಗ್‌ನಲ್ಲಿ ಟ್ರೆಂಟ್ ಬೋಲ್ಟ್, ಲಾಕ್ಕಿ ಫರ್ಗುಸನ್, ಟಿಮ್ ಸೌಥಿ ಜೊತೆಗೆ ಮಿಚೆಲ್ ಸ್ಯಾಂಟ್ನರ್ ಅವರುಗಳು ಭಾರತದ ಬಲಿಷ್ಠ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕುವ ಸಾಮರ್ಥ್ಯ ಹೊಂದಿದ್ದಾರೆ.
2019ರ ಸೋಲಿನ ಪ್ರತೀಕಾರ!
ಉಭಯ ತಂಡಗಳು ಈ ಹಿಂದೆ ನಡೆದ 2019ರ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಕೂಡ ಮುಖಾಮುಖಿ ಆಗಿದ್ದವು. ಮಳೆಯಿಂದಾಗಿ ಅಡ್ಡಿಯಾಗಿದ್ದ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಭರ್ಜರಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತ್ತು. ಅಂದು ಎದುರಾದ ಸೆಮೀಸ್ ಸೋಲಿನ ಆಘಾತ ಭಾರತದ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೇ ಟೀಂ ಇಂಡಿಯಾ ಆಟಗಾರರಲ್ಲಿ ಇಂದಿಗೂ ಜೀವಂತ ಉಳಿದಿದೆ. ಹೀಗಾಗಿ 2023ರ ಸೆಮಿಫೈನಲ್‌ನಲ್ಲಿ ಈ ಎರಡು ತಂಡಗಳು ಮತ್ತೊಮ್ಮೆ ಮುಖಾಮುಖಿ ಆಗುತ್ತಿರುವುದು ಇಂದಿನ ಪಂದ್ಯದ ರೋಚಕತೆ ಹೆಚ್ಚುವಂತೆ ಮಾಡಿದೆ. ಅಲ್ಲದೆ ಇಂದಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ, 2019ರ ವಿಶ್ವಕಪ್‌ನ ಸೆಮಿಫೈನಲ್ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳುವ ನಿರೀಕ್ಷೆ ಎದುರಾಗಿದೆ.