ಉಡುಪಿ: ಉಡುಪಿ -ನೇಜಾರು ಸಮೀಪ ತಾಯಿ ಮತ್ತು ಮೂವರು ಮಕ್ಕಳ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಕುಡುಚಿಯಲ್ಲಿ ಬಂಧಿತನಾದ ಆರೋಪಿಯನ್ನು ಇಂದು ಉಡುಪಿಗೆ ಕರೆತರಲಾಗಿದೆ.
ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ಕರೆತಂದ ಉಡುಪಿ ಪೊಲೀಸರು, ತೀವ್ರ ವಿಚಾರಣೆಗೆ ಒಳಪಡಿಸಿ, ಪೊಲೀಸ್ ವಶಕ್ಕೆ ಪಡೆಯುವ ಸಂಬಂಧ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಗಳಿವೆ. ಬೆಳಗಾವಿಯ ರಾಯಭಾಗ ತಾಲೂಕಿನ ಕುಡುಚಿಯಲ್ಲಿ ಪ್ರವೀಣ್ ಚೌಗಲೆಯನ್ನು ಪೊಲೀಸರು ಬಂಧಿಸಿದ್ದರು.
ಉಡುಪಿ, ಬೆಳಗಾವಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ಅರೋಪಿ ಮೊಬೈಲ್ ಫೋನ್ ಸ್ವಿಚ್ ಆನ್ ಮಾಡುತ್ತಿದ್ದಂತೆ ಪೊಲೀಸರು ಅಲರ್ಟ್! ಆಗಿದ್ದು, ಬೆಳಗಾವಿಯ ತನ್ನ ಸಂಬಂಧಿಯ ಮನೆಯಲ್ಲಿ ಆರೋಪಿ ಪ್ರವೀಣ್ ತಂಗಿದ್ದ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮೃತ ಅಯ್ನಾಜ್ ಮತ್ತು ಪ್ರವೀಣ್ ಚೌಗಲೆ ಜೊತೆಯಲ್ಲಿಯೇ ಕೆಲಸ ಮಾಡುತ್ತಿದ್ದರು. ಅಯ್ನಾಜ್ ಏರ್ ಇಂಡಿಯಾದಲ್ಲಿ ಗಗನಸಖಿಯಾಗಿದ್ದರು. ಏರ್ ಇಂಡಿಯಾದಲ್ಲಿ ಕ್ಯಾಬಿನ್ ಕ್ರೂ ಆಗಿದ್ದ ಪ್ರವೀಣ್ ಚೌಗಲೆ, ಪರಸ್ಪರ ದ್ವೇಷ ಅಥವಾ ಏಕಮುಖ ಪ್ರೀತಿಯಿಂದ ಆರೋಪಿ ಕೃತ್ಯ ಎಸಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕಿಸಿ ತನಿಖೆ ಕೈಗೊಂಡಿದ್ದಾರೆ.
ಈ ಸಂಬಂಧ ಉಡುಪಿ ಎಸ್ ಪಿ ಡಾ. ಅರುಣ್ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣ ಸಂಬಂಧ ಹಲವಾರು ಆಯಾಮದಲ್ಲಿ ತನಿಖೆ ಮಾಡುತ್ತಿದ್ದೇವೆ, ಪ್ರವೀಣ್ ಅರುಣ್ ಚೌಗಲೆ ಯನ್ನು ವಶಕ್ಕೆ ಪಡೆದಿದ್ದೇವೆ, ಸಂಜೆಯೊಳಗೆ ತನಿಖೆ ಮಾಡಿ ಪೂರ್ಣ ಚಿತ್ರಣ ಸಿಗಲಿದೆ ಎಂದು ತಿಳಿಸಿದರು.
ಸದ್ಯ ಚೌಗಲೆಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ, ಸಿಆರ್ ಪಿಎಫ್ ಅಲ್ಲ, ಸಿವಿಲ್ ಪೊಲೀಸ್ ನಲ್ಲಿ ಇದ್ದಾನೆ ಎಂಬ ಮಾಹಿತಿ ಇದೆ, ಉಡುಪಿ ಜಿಲ್ಲೆ ಮತ್ತು ಬೆಳಗಾವಿ ಜಿಲ್ಲೆಯ ಪೊಲೀಸರ ಸಹಕಾರದಿಂದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಅದೇ ರೀತಿಯಲ್ಲಿ ಹಲವಾರು ಶಂಕಿತರ ವಿಚಾರಣೆ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ಜಿಲ್ಲೆಯ ಎಲ್ಲಾ ಕಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ, ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು. ಅಜ್ಞಾತ ಸ್ಥಳದಲ್ಲಿ ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.