IND v NZ: ಕಿವೀಸ್‌ ವಿರುದ್ಧ ಆಕ್ರಮಣಕಾರಿ ಬೌಲಿಂಗ್‌: ಜಹೀರ್‌ ದಾಖಲೆ ಮುರಿದ ಶಮಿ

ಬೆಂಗಳೂರು: ಟೀಂ ಇಂಡಿಯಾದ ಪ್ರಮುಖ ಬೌಲಿಂಗ್‌ ಅಸ್ತ್ರವಾಗಿರುವ ವೇಗದ ಬೌಲರ್‌ ಮೊಹಮ್ಮದ್‌ ಶಮಿ, ಏಕದಿನ ವಿಶ್ವಕಪ್‌ನಲ್ಲಿ ಮಾಜಿ ವೇಗದ ಬೌಲರ್‌ ಜಹೀರ್‌ ಖಾನ್‌ ಅವರ ದಾಖಲೆಯನ್ನ ಮುರಿದಿದ್ದಾರೆ.

ಮುಂಬೈನ ವಾಂಖೆಡೆಯಲ್ಲಿ ನಡೆದ ನ್ಯೂಜಿ಼ಲೆಂಡ್‌ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಆಕ್ರಮಣಕಾರಿ ಬೌಲಿಂಗ್‌ ಪ್ರದರ್ಶಿಸಿದ ಶಮಿ, ಆ ಮೂಲಕ ಕಿವೀಸ್‌ ಬ್ಯಾಟಿಂಗ್‌ ಬೆನ್ನೆಲುಬು ಮುರಿದರು. ಮಹತ್ವದ ಪಂದ್ಯದಲ್ಲಿ 57 ರನ್‌ಗಳನ್ನ ನೀಡಿ 7 ವಿಕೆಟ್‌ಗಳನ್ನ ಪಡೆದು ಮಿಂಚಿದ ವೇಗದವ ಬೌಲರ್‌, ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಶ್ರೇಷ್ಠ ಬೌಲಿಂಗ್‌ ಪ್ರದರ್ಶನ ನೀಡಿದರು. ಅಲ್ಲದೇ ಭಾರತದ ಸ್ಟುವರ್ಟ್‌ ಬಿನ್ನಿ ಅವರ ಧೀರ್ಘಕಾಲದ ದಾಖಲೆಯನ್ನ ಸಹ ಮುರಿದರು.

ಅಲ್ಲದೇ ಒಂದು ವಿಶ್ವಕಪ್‌ ಆವೃತ್ತಿಯಲ್ಲಿ ಹೆಚ್ಚು ವಿಕೆಟ್‌ಗಳನ್ನ ಪಡೆದ ಭಾರತದ ಬೌಲರ್‌ಗಳ ಪೈಕಿ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್‌ ಜಹೀರ್‌ ಖಾನ್‌ ಅವರ ದಾಖಲೆಯನ್ನ ಸಹ ಬ್ರೇಕ್‌ ಮಾಡಿದರು. ಪ್ರಸಕ್ತ ವಿಶ್ವಕಪ್‌ನಲ್ಲಿ ಅದ್ಭುತ ಬೌಲಿಂಗ್‌ ಪ್ರದರ್ಶನ ನೀಡುತ್ತಿರುವ ವೇಗಿ ಶಮಿ, ಆಡಿರುವ 6 ಪಂದ್ಯಗಳಲ್ಲಿ 23 ವಿಕೆಟ್‌ಗಳನ್ನ ಪಡೆದಿದ್ದು, ಒಟ್ಟು 3 ಬಾರಿ ಐದು ವಿಕೆಟ್‌ಗಳನ್ನ ಪಡೆದು ಮಿಂಚಿದ್ದಾರೆ. ಇದಕ್ಕೂ ಮುನ್ನ 2011ರಲ್ಲಿ ಭಾರತ ವಿಶ್ವಕಪ್‌ ಗೆದ್ದ ಆವೃತ್ತಿಯಲ್ಲಿ ಜಹೀರ್‌ ಖಾನ್‌, 21 ವಿಕೆಟ್‌ ಪಡೆದಿದ್ದು ಈವರೆಗಿನ ದಾಖಲೆಯಾಗಿತ್ತು.

ಕಿವೀಸ್‌ ವಿರುದ್ಧ 7 ವಿಕೆಟ್‌ಗಳನ್ನ ಪಡೆದು ಮಿಂಚಿದ ಮೊಹಮ್ಮದ್‌ ಶಮಿ, ಆ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಒಟ್ಟಾರೆ 4ನೇ ಬಾರಿಗೆ ಐದು ವಿಕೆಟ್‌ಗಳನ್ನ ಪಡೆದಿದ್ದಾರೆ. ಪ್ರಸಕ್ತ ವಿಶ್ವಕಪ್‌ ಆವೃತ್ತಿಯಲ್ಲೇ ಮೂರನೇ ಬಾರಿಗೆ 5 ವಿಕೆಟ್‌ಗಳನ್ನ ಪಡೆದಿರುವ ಶಮಿ, ಈ ಹಿಂದೆ 2019ರ ವಿಶ್ವಕಪ್‌ ಆವೃತ್ತಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ 5 ವಿಕೆಟ್‌ಗಳನ್ನ ಪಡೆದಿದ್ದರು. ಈ ಪ್ರದರ್ಶನದೊಂದಿಗೆ ಆಸೀಸ್‌ನ ಪ್ರಮುಖ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ಅವರ ದಾಖಲೆಯನ್ನ ಸಹ ಮುರಿದಿದ್ದಾರೆ.

More News