Jagadish Shettar: ಬಿಜೆಪಿಯ ಒಳ ಜಗಳ ಎಲ್ಲಿಗೆ ಹೋಗಿ ಮುಟ್ಟುತ್ತೆ ಕಾದು ನೋಡಿ: ಜಗದೀಶ್ ಶೆಟ್ಟರ್ ಮಾರ್ಮಿಕ ಉತ್ತರ

ಬಿಜೆಪಿ ಒಳ ಗಲಾಟೆ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ. ಎಲ್ಲವನ್ನು ಕಾದು ನೋಡಿ, ಮುಂದೆ ನಿಮಗೆ ಗೊತ್ತಾಗುತ್ತೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವ್ಯಂಗ್ಯವಾಗಿ ಉತ್ತರಿಸಿದರು.

ವಿಜಯೇಂದ್ರ ರಾಜ್ಯಾಧ್ಯಕ್ಷ ಪಟ್ಟ ಅಲಂಕಾರ ಮಾಡುವ ವೇಳೆ ಬಹುತೇಕ ನಾಯಕರ ಗೈರು ಆದ ವಿಚಾರದ ಕುರಿತು ಹುಬ್ಬಳ್ಲಿಯಲ್ಲಿ ಮಾತನಾಡಿದ ಅವರು, ನನ್ನ ಪಕ್ಷಾಂತರದ ಎಫೆಕ್ಟ್ ಪಂಚ ರಾಜ್ಯಗಳ ಚುನಾವಣೆಯ ಮೇಲೂ ಆಗಿದೆ. ಹಾಗಾಗಿಯೇ ಅಲ್ಲಿ 80 ವರ್ಷ ವಯಸ್ಸು ದಾಟಿದವರಿಗೂ ಟಿಕೆಟ್ ಕೊಟ್ಟಿದ್ದಾರೆ. ಬಿಜೆಪಿ ಹೀನಾಯ ಸ್ಥಿತಿಗೆ ತಲುಪಿದೆ. ರಿಪೇರಿ ಮಾಡಲಾರದಷ್ಟು ವ್ಯವಸ್ಥೆ ಹದಗೆಟ್ಟು ಹೋಗಿದೆ. ವಿಜಯೇಂದ್ರ ಪದಗ್ರಹಣಕ್ಕೆ ಯಾವೊಬ್ಬ ಕೇಂದ್ರ ನಾಯಕರು ಬಂದಿರಲಿಲ್ಲ. ವೀಕ್ಷಕರೂ ಸಹ ಬಂದಿರಲಿಲ್ಲ. ರಾಜ್ಯ ಬಿಜೆಪಿ ಪರಿಸ್ಥಿತಿಗೆ ಇದೇ ಸಾಕ್ಷಿ ಎಂದು ಟೀಕಿಸಿದರು.

ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿರೋದು ಅವರಿಗೆ ಬಿಟ್ಟ ವಿಚಾರ. ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಬೇಕಿತ್ತು, ವಿಜಯೇಂದ್ರರನ್ನು ಮಾಡಿದ್ದಾರೆ.ಆದರೆ ರಾಜ್ಯಾಧ್ಯಕ್ಷ ಸ್ಥಾನಕಾಂಕ್ಷಿಗಳು ಯಾರೂ ಪದಗ್ರಹಣಕ್ಕೆ ಹೋಗಲಿಲ್ಲ.
ಒಮ್ಮೆ ನೇಮಕವಾದ ಮೇಲೆ ಎಲ್ಲರೂ ಕೂಡಿ ಕೆಲಸ ಮಾಡಬೇಕೆಂಬ ಮನೋಭಾವ ಬರಬೇಕಿತ್ತು. ಹೀಗಾಗಿ ಬಿಜೆಪಿಯ ಒಳ ಜಗಳ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ. ಎಲ್ಲವನ್ನು ಕಾದು ನೋಡಿ, ಮುಂದೆ ನಿಮಗೆ ಗೊತ್ತಾಗುತ್ತೆ ಎಂದರು

ಬಿಜೆಪಿಯಲ್ಲಿ ಹಿರಿಯರನ್ನು ದೂರವಿಡುವ ಕೆಲಸ ಬಹಳ ಹಿಂದಿನಿಂದಲೂ ನಡೆದಿದೆ. ಪಕ್ಷಕ್ಕಾಗಿ ಸಂಘಟನೆ ಮಾಡಿದವರನ್ನು, ದುಡಿದವರನ್ನು ದೂರವಿಡಲಾಗುತ್ತಿದೆ. ಸದಾನಂದ ಗೌಡರನ್ನು ದೆಹಲಿಗೆ ಕರೆಯಿಸಿ ಮೂರು ದಿನ ಕಾಯಿಸಿದರು. ಐದು ನಿಮಿಷ ಮಾತನಾಡುವಷ್ಟು ಸೌಜನ್ಯವನ್ನು ತೋರಲಿಲ್ಲ. ಬಿಜೆಪಿ ಹಿರಿಯರನ್ನು ನಡೆಸಿಕೊಳ್ಳುವ ರೀತಿಗೆ ಇದೊಂದು ಉದಾಹರಣೆ. ಎಲ್ ಕೆ ಅಡ್ವಾಣಿ ಮುರುಳಿಮನೋಹರ ಜೋಷಿ ಮೊದಲಾದವರಿಗೆ ರಾಜಕೀಯ ನಿವೃತ್ತಿ ಕೊಟ್ಟುಬಿಟ್ಟರು.
ನನಗೆ, ಲಕ್ಷ್ಮಣ್ ಸವದಿ ಮತ್ತು ಈಶ್ವರಪ್ಪಗೆ ಕರ್ನಾಟಕದಲ್ಲಿ ಟಿಕೆಟ್ ಕೊಡಲಿಲ್ಲನನಗೆ ಟಿಕೆಟ್ ತಪ್ಪಿಸಲು ಏನು ಕಾರಣ ಅಂತ ಇದುವರೆಗೂ ಹೇಳಿಲ್ಲ. ಇದರ ಪರಿಣಾಮ ಏನಾಯ್ತು ಅಂತ ಇಡೀ ಜಗತ್ತಿಗೆ ಗೊತ್ತಿದೆ ಎಂದು ದೂರಿದರು.

ಬಿಜೆಪಿ ವರಿಷ್ಠರಿಗೆ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಅನ್ನೋ ಆಸೆ. ಆದರೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತು. ಹೀಗಾಗಿ ಪಂಚ ರಾಜ್ಯಗಳ ಚುನಾವಣೆಯಲ್ಲಿ ಹಿರಿಯರಿಗೆ ಮಣೆ ಹಾಕಲಾಗಿದೆ.
70 – 75 ವಯಸ್ಸಾದಂತವರಿಗೂ ಟಿಕೆಟ್ ನೀಡಲಾಗಿದೆ.‌
ಅವರಿಗೆ ಯಾಕೆ ಟಿಕೆಟ್ ಕೊಟ್ಟರು‌, ನಿಯಮ ಎಲ್ಲರಿಗೂ ಒಂದೇ ಅನ್ವಯ ಆಗಬೇಕಲ್ಲವೇ..? ಅಧಿಕಾರ ಆಸೆಯಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರುತ್ತಾರೆ. ವಯಸ್ಸಿನ ನೆಪದಲ್ಲಿ ಅಡ್ವಾಣಿ ಮುರಳಿ ಮನೋಹರ್ ಜೋಶಿಯವರನ್ನು ಮನೆಗೆ ಕಳಿಸಿದ್ರು. ಈಗ ನೋಡಿದರೆ 80 ವರ್ಷ ಆದವರಿಗೂ ಟಿಕೆಟ್ ಕೊಟ್ಟಿದ್ದಾರೆ ಎಂದು ಆರೋಪಿಸಿದರು.

ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವುದರಿಂದ ಯಾವುದೇ ಬದಲಾವಣೆ ಆಗಲ್ಲ. ಬಿಜೆಪಿ ಕುಸಿತಿರುವ ಸಂದರ್ಭದಲ್ಲಿ ಹೆಚ್ಚಿನ ಶಕ್ತಿ ತೋರಿಸಲು ಸಾಧ್ಯವಿಲ್ಲ. ಬಿಜೆಪಿ ಕಾರ್ಯಕರ್ತರು ಧೃತಿಗೆಟ್ಟಿದ್ದಾರೆ, ಭರವಸೆ ಕಳೆದುಕೊಂಡಿದ್ದಾರೆ. ನಾಯಕನಿಲ್ಲದ ಪಕ್ಷ ಅನ್ನೋ ಕೊರಗು ಅವರನ್ನು ಕಾಡ್ತಿದೆ.
ಆಪರೇಷನ್ ಕಮಲ ಪ್ರಕ್ರಿಯೆ ನಡೆದೇ ಇದೆ. ಈ ರೀತಿ ಮಾಡಿದ್ರೆ ಕೈ ಶಾಸಕರು ತಮ್ಮ ಪಕ್ಷಕ್ಕೆ ಬರ್ತಾರೆ ಅನ್ನೋ ಭ್ರಮೆಯಲ್ಲಿದ್ದಾರೆ.‌ಆಪರೇಷನ್ ಕಮಲ ಪ್ರಯತ್ನ ಸಫಲವಾಗಲ್ಲ ಎಂದು ತಿಳಿಸಿದರು.

ಸಿಎಂ‌ ಪುತ್ರ ಯತೀಂದ್ರ ವೀಡಿಯೋ ವೈರಲ್ ವಿಚಾರದ ಕುರಿತು ಮಾತನಾಡಿದ ಅವರು, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ರೀತಿ ಆರೋಪ‌ ಸಹಜ. ಯಾವುದೇ ಭ್ರಷ್ಟಾಚಾರದ ಬಗ್ಗೆ ಸ್ಪಷ್ಟತೆ ಇಲ್ಲ. ಇದು ಕೇವಲ ಹಿಟ್ ಆ್ಯಂಡ್ ರನ್ ರೀತಿ‌ ಆರೋಪಗಳು. ಯಾವುದೇ ಒಂದು ಭ್ರಷ್ಟಾಚಾರದ ಬಗ್ಗೆ ಆಧಾರ ಸಹಿತ ಆರೋಪ ಮಾಡುವ ಕೆಲಸಗಳಾಗುತ್ತಿಲ್ಲ. 40 ಕೋಟಿ ಹಣದ ಬಗ್ಗೆ ಬಿಜೆಪಿಯವರು ಆರೋಪ ಮಾಡಿದ್ರು ಅದರ ಬಗ್ಗೆ ಆಧಾರ ನೀಡಿ. ಕೇವಲ ಮಾದ್ಯಮಗಳಲ್ಲಿ ಬಿತ್ತರವಾಗುವ ಸುದ್ದಿಗಳಿಂದ ಆರೋಪ‌ ಮಾಡುತ್ತಾರೆ. ಯತೀಂದ್ರ ಅವರ ವೀಡಿಯೋ‌ ಪ್ರಕರಣದ ಬಗ್ಗೆ ಸುಖಾಸುಮ್ಮನೇ ಆರೋಪ ಮಾಡೋದು ಸರಿಯಲ್ಲ. ಯತೀಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಅನ್ನೋದು ಸ್ಷಷ್ಟವಾಗಿ ಆರೋಪ ಮಾಡಲಿ. ಕೇವಲ ಹಿಟ್ ಆ್ಯಂಡ್ ರನ್ ಆರೋಪ ಮಾಡೋದು ಸರಿಯಲ್ಲ ಎಂದು ಯತೀಂದ್ರ ವೀಡಿಯೋ ಕುರಿತು ಸಮರ್ಥನೆ‌ ಮಾಡಿಕೊಂಡರು.

More News