ಚಿತ್ರದುರ್ಗ : ಫೋಕ್ಸೋ ಕಾಯಿದೆಯಡಿ ಬಂಧನಕ್ಕೊಳ್ಳಗಾಗಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ ಶಿವಮೂರ್ತಿ ಮುರುಘ ಶರಣರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಮಂಗಳವಾರದೊಳಗೆ ಹಾಜರು ಪಡಿಸಲು ಪೊಲೀಸರಿಗೆ ನ್ಯಾಯಾಲಯ ಆದೇಶ ನೀಡಿದೆ.
ನವೆಂಬರ್ 16 ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಕಾರಾಗೃಹದಿಂದ ಬಿಡುಗಡೆಯಾಗಿದ್ದ ಶರಣರಿಗೆ ವಿಚಾರಣೆ ಮುಗಿಯುವವರೆಗೂ ಜಿಲ್ಲಾ ಗಡಿ ಪ್ರವೇಶಿಸದಂತೆ ನ್ಯಾಯಾಲಯ ಷರತ್ತು ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಶರಣರು ದಾವಣಗೆರೆಯ ವಿರಕ್ತ ಮಠದಲ್ಲಿ ವಾಸವಾಗಿದ್ದರು.
ಶಿವಮೂರ್ತಿ ಶರಣರ ವಿರುದ್ಧ ದಾಖಲಾಗಿರುವ ಎರಡನೇ ಪೋಕ್ಸೋ ಪ್ರಕರಣದಲ್ಲಿ ಆರೋಪಿ ವಿರುದ್ದ ಬಾಡಿ ವಾರೆಂಟ್ ಹೊರಡಿಸಲಾಗಿತ್ತು. ಎರಡನೇ ಪ್ರಕರಣದಲ್ಲಿ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಶರಣರ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಿದೆ.
ಶರಣರ ಪರ ವಕೀಲರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಅನುಮತಿ ಕೋರಿದ್ದರು. ಆದರೆ, ಇದಕ್ಕೆ ಸರ್ಕಾರಿ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆರೋಪಿ ಪರ ಜಾಮೀನು ರಹಿತ ವಾರೆಂಟ್ ಹೊರಡಿಸುವಂತೆ ನ್ಯಾಯಾಲಯಕ್ಕೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಈ ಆದೇಶ ಹೊರಡಿಸಿದೆ.




