ಬೆಂಗಳೂರು : ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ನಡೆಸಲು ಉದ್ದೇಶಿಸಿರುವ ಕಂಬಳಕ್ಕೆ ಕುಸ್ತಿಪಟುಗಳಿಂದ ಟೀಕೆಗೆ ಗುರಿಯಾಗಿರುವ ವಿವಾದಿತ ವ್ಯಕ್ತಿಯೆಂದೇ ಖ್ಯಾತಿ ಪಡೆದಿರುವ ರಾಷ್ಟ್ರೀಯ ಕುಸ್ತಿ ಫೆಡರೇಷನ್ ನ ಅಧ್ಯಕ್ಷ ಬ್ರಿಜ್ ಭೂಷಣ್ ಆಮಂತ್ರಣ ನೀಡುತ್ತಿರುವ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಶಾಸಕ ಹಾಗೂ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ ಪ್ರತಿಕ್ರಿಯೆ ನೀಡಿದ್ದು, ಬ್ರಿಜ್ ಭೂಷಣ್ ಕುಡುಬಿ ಮತ್ತು ಸಿದ್ದಿ ಜನಾಂಗದವರಿಗೆ ಗೋವಾದಲ್ಲಿ ಕುಸ್ತಿ ತರಬೇತಿ ನೀಡಿದ್ದರು, ಈ ಸೇವೆಯನ್ನು ಪರಿಗಣಿಸಿ ಕಂಬಳಕ್ಕೆ ಆಹ್ವಾನ ನೀಡಲಾಗಿತ್ತು, ಆದರೆ ಬ್ರಿಜ್ ಭೂಷಣ್ ಕಂಬಳಕ್ಕೆ ಆಗಮಿಸುವ ಬಗ್ಗೆ ಕನ್ಫರ್ಮೇಷನ್ ನೀಡಿರಲಿಲ್ಲ ಎಂದು ವಿವರಿಸಿದರು.
ಆದರೆ, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಹಾಗೂ ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಮುದ್ರಣವಾಗಿರುವ ಆಮಂತ್ರಣ ಪತ್ರಿಕೆಯಿಂದ ಬ್ರಿಜ್ ಭೂಷಣ್ ಹೆಸರನ್ನು ಕೈಬಿಡಲು ಕಂಬಳ ಸಮಿತಿ ಮುಂದಾಗಿದೆ ಎಂದು ಅಶೋಕ್ ರೈ ತಿಳಿಸಿದರು.
ಕಂಬಳ ಒಂದು ಕ್ರೀಡೆ, ಇದು ದೊಡ್ಡ ಕಾರ್ಯಕ್ರಮ ಆಗಿದೆ, ಇದಕ್ಕಾಗಿ ಬೇರೆ ಬೇರೆ ಸಂಘಟನೆಯವರು ಬಂದು ಅನೇಕ ಮನವಿ ಮಾಡುತ್ತಿದ್ದಾರೆ, ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಬಂದು ವೇದಿಕೆಗೆ ಅವರ ಹೆಸರನ್ನು ಇಡಲು ಹೇಳುತ್ತಿದ್ದಾರೆ, ಸಿದ್ದಿ ಜನಾಂಗದವರು ಬಂದು ಕೋರಿದ್ರು ಹೀಗೆ ಒತ್ತಡಗಳು ಬರುತ್ತಿವೆ ಎಂದರು.
ಆದ್ರೆ ಅವರು ಮೊನ್ನೆಯೇ ನಾನು ಕಾರ್ಯಕ್ರಮಕ್ಕೆ ಬರೋದಿಲ್ಲ ಅಂತ ಹೇಳಿದ್ದರು, ಆದ್ರೆ ಇನ್ವಿಟೇಷನ್ ನಲ್ಲಿ ಅವರ ಹೆಸರಿದೆ, ಅವರು ಕಂಬಳಕ್ಕೆ ಬರೋದಿಲ್ಲ, ಪತ್ರಿಕೆಯನ್ನು ಕೂಡ ನಾವು ಬದಲು ಮಾಡುತ್ತೇವೆ, ಕಂಬಳ ಅಂದ್ರೆ ಕಾಂಗ್ರೆಸ್ ನವರು ಇದ್ದಾರೆ ಹಾಗೆ ಬಿಜೆಪಿಯವರು ಇದ್ದಾರೆ ಎಂದು ಸಮಜಾಯಿಸಿ ನೀಡಿದರು.

ವಿವಾದಕ್ಕೆ ತೆರೆ ಎಳೆದ ಕಂಬಳ ಸಮಿತಿ ಆಯೋಜಕರು
ವಿವಾದಕ್ಕೆ ತೆರೆ ಎಳೆಯಲು ಮುಂದಾದ ಅಶೋಕ್ ರೈ, ಆಹ್ವಾನ ಪತ್ರಿಕೆಯಿಂದ ಬ್ರಿಜ್ ಭೂಷಣ್ ಹೆಸರು ಕೈ ಬಿಡಲು ನಿರ್ಧಾರಿಸಲಾಗಿದೆ ಎಂದು ಘೋಷಿಸಿದರು. ಕಡೆ ಘಳಿಗೆಯಲ್ಲಿ ಆಹ್ವಾನ ಪತ್ರಿಕೆ ಬದಲು ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.




