ಬೆಂಗಳೂರು: ಟೀಂ ಇಂಡಿಯಾದ ಪ್ರಮುಖ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಹಾಗೂ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಸಂಜೂ ಸ್ಯಾಮ್ಸನ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣ ಮುಕ್ತಾಯಗೊಂಡಿತೇ? ಎಂಬ ಪ್ರಶ್ನೆಯೊಂದು ಕ್ರಿಕೆಟ್ ಅಭಿಮಾನಿಗಳನ್ನ ಕಾಡುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಗೆ ಈ ಇಬ್ಬರು ಆಟಗಾರರನ್ನ ತಂಡಕ್ಕೆ ಆಯ್ಕೆ ಮಾಡದೆ ಇರುವುದು ಈ ಅನುಮಾನ ಮೂಡಲು ಕಾರಣವಾಗಿದೆ.
ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿಗೆ ಭಾರತ ತಂಡವನ್ನ ಪ್ರಕಟಿಸಿರುವ ಬಿಸಿಸಿಐ ಆಯ್ಕೆ ಮಂಡಳಿ, ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ದು, ಇದರ ನಡುವೆ ಮುಂಬರುವ 2024ರ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಆದರೆ ಈ ತಂಡದಲ್ಲಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಹಾಗೂ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಸಂಜೂ ಸ್ಯಾಮ್ಸನ್ ಅವರುಗಳಿಗೆ ಅವಕಾಶ ನೀಡದಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರದ ಜೊತೆಗೆ ಹಲವು ಪ್ರಶ್ನೆಗಳನ್ನ ಮೂಡುವಂತೆ ಮಾಡಿದೆ.
ಪ್ರಮುಖವಾಗಿ ಇತ್ತೀಚೆಗೆ ನಡೆದ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದ ಯುಜ್ವೇಂದ್ರ ಚಹಲ್, ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಹೊಂದಿದ್ದರು. ಆದರೆ ಈ ನಿರೀಕ್ಷೆಯನ್ನ ಹುಸಿಯಾಗಿಸಿರುವ ಆಯ್ಕೆ ಮಂಡಳಿ, ಚಹಲ್ ಅವರನ್ನ ಮತ್ತೊಮ್ಮೆ ತಂಡದಿಂದ ಕೈಬಿಟ್ಟಿದೆ. ತಂಡದ ಪ್ರಮುಖ ಸ್ಪಿನ್ ಅಸ್ತ್ರವಾಗಿ ಮಿಂಚಿದ್ದ ಚಹಲ್, 2021ರಿಂದ ನಿರಂತರವಾಗಿ ಮಹತ್ವದ ಟೂರ್ನಿಗಳಲ್ಲಿ ಆಡುವ ಅವಕಾಶವನ್ನ ಕಳೆದುಕೊಂಡಿದ್ದಾರೆ. ಇದು ಸಹಜವಾಗಿಯೇ ಯುಜ್ವೇಂದ್ರ ಚಹಲ್ ಹಾಗೂ ಅವರ ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ.
ಒಂದು ಕಾಲದಲ್ಲಿ ಭಾರತ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದ ಚಹಲ್, 2021 ಹಾಗೂ 2022ರಲ್ಲಿ ನಡೆದ ಟಿ20 ವಿಶ್ವಕಪ್ ತಂಡದಲ್ಲಿ ಆಡುವ ಅವಕಾಶ ಪಡೆಯುವಲ್ಲಿ ವಿಫಲವಾಗಿದ್ದರು. ಇದಾದ ಬಳಿಕ ಪ್ರಸಕ್ತ ವರ್ಷದಲ್ಲಿ ನಡೆದ ಏಷ್ಯಾಕಪ್‌ನಲ್ಲೂ ಆಡುವ ಅವಕಾಶ ಲಭಿಸಿರಲಿಲ್ಲ. ಆದರೆ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅವಕಾಶ ದೊರೆಯುವ ನಿರೀಕ್ಷೆ ಹೊಂದಲಾಗಿತ್ತಾದರೂ, ಕೊನೆ ಕ್ಷಣದಲ್ಲಿ ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನ ಆಯ್ಕೆ ಮಾಡಿ, ಯುಜ್ವೇಂದ್ರ ಚಹಲ್ ಅವರನ್ನ ತಂಡದಿಂದ ಕೈಬಿಟ್ಟಿತ್ತು. ಇದರ ಬೆನ್ನಲ್ಲೇ ಆಸೀಸ್ ವಿರುದ್ಧದ ಟಿ20 ಸರಣಿಯಿಂದಲೂ ಚಹಲ್ ಅವರನ್ನ ಕೈಬಿಡಲಾಗಿದ್ದು, ಯುವ ಸ್ಪಿನ್ನರ್ ರವಿ ಬಿಷ್ಣೋಯಿ ಅವರಿಗೆ ಅವಕಾಶ ನೀಡಲಾಗಿದೆ. ಈ ಎಲ್ಲಾ ಬೆಳವಣಿಗೆ ಗಮನಿಸಿದರೆ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣ ಮುಕ್ತಾಯವಾಯಿತೇ? ಎಂಬ ಪ್ರಶ್ನೆ ಮೂಡಲು ಕಾರಣವಾಗಿದೆ.
ಮತ್ತೊಂದೆಡೆ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಸಂಜೂ ಸ್ಯಾಮ್ಸನ್ ಕೂಡ ಇದೇ ಹಾದಿಯಲ್ಲಿದ್ದಾರೆ. ದೇಶಿಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಂಜೂ ಸ್ಯಾಮ್ಸನ್ ಪ್ರತಿಬಾರಿ ನಿರಾಸೆ ಅನುಭವಿಸುತ್ತಾ ಬಂದಿದ್ದಾರೆ. 2021 ಹಾಗೂ 2022ರ ಟಿ20 ವಿಶ್ವಕಪ್ ಜೊತೆಗೆ ಇದೇ ವರ್ಷದಲ್ಲಿ ನಡೆದ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಂಜೂ ಸ್ಯಾಮ್ಸನ್‌ಗೆ ಲಭಿಸಲಿಲ್ಲ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗಾಗಿ ಆಯ್ಕೆ ಮಾಡಿರುವ ತಂಡದಲ್ಲೂ ಸಂಜೂ ಅವರಿಗೆ ಸ್ಥಾನ ಸಿಗದಿರುವುದು ಗಮನಿಸಿದರೆ ಕೇರಳ ಮೂಲದ ಸಂಜೂ ಸ್ಯಾಮ್ಸನ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣ ಅಂತ್ಯವಾಯಿತೇ? ಎಂಬ ಪ್ರಶ್ನೆ ಮೂಡಿಸಿದೆ.




