HARASSED IN NAMMA METRO: ನಮ್ಮ ಮೆಟ್ರೋ ರೈಲಿನಲ್ಲಿ ಕಾಲೇಜು ಯವತಿಗೆ ಲೈಂಗಿಕ ಕಿರುಕುಳ: ಕಿಡಿಗೇಡಿಗಳ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ

ಬೆಂಗಳೂರು : ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಾಲೇಜು ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವ್ಯಕ್ತಿಯೋರ್ವ ಯುವತಿಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಯುವತಿಯ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರೊಂದಿಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಗಾಗ್ಗೆ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚು ಕೇಳಿಬರುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ಲುಲು ಮಾಲ್ ನಲ್ಲಿ ನಡೆದಿದ್ದ ಲೈಂಗಿಕ ಕಿರುಕುಳ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಲೈಂಗಿಕ ಕಿರುಕುಳ ಘಟನೆ ಬೆಳಕಿಗೆ ಬಂದಿದೆ.
ನಮ್ಮ ಮೆಟ್ರೋ ರೈಲು ಸದಾ ತುಂಬಿ ತುಳುಕುತ್ತಿದೆ. ಇದರ ನಡುವೆಯೇ ವ್ಯಕ್ತಿಯೋರ್ವ ಈ ರೀತಿ ನಡೆದುಕೊಂಡಿದ್ದು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿಎಂ ಆರ್ ಸಿಎಲ್ ಈ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನವೆಂಬರ್ 20 ಸೋಮವಾರ ಬೆಳಗ್ಗೆ ಸುಮಾರು 8.30ರ ಸಮಯದಲ್ಲಿ ಮೆಜೆಸ್ಟಿಕ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಯುವತಿಯೊಬ್ಬಳು ಮೆಜೆಸ್ಟಿಕ್ ನಲ್ಲಿ ಮೆಟ್ರೋ ಪ್ರಯಾಣ ಬೆಳೆಸಿದ್ದಾರೆ. ಈ ಸಂದರ್ಭದಲ್ಲಿ ರೈಲಿನಲ್ಲಿ ಭಾರೀ ದಟ್ಟಣೆ ಇತ್ತು.
ಮೆಟ್ರೋ ರೈಲು ಹತ್ತಿದ ಕೆಲ ಸಮಯದ ನಂತರ ಕೆಂಪು ಅಂಗಿ ಧರಿಸಿದ್ದ ವ್ಯಕ್ತಿಯೋರ್ವ ಯುವತಿಯ ಹಿಂಬದಿಯಿಂದ ಸ್ಪರ್ಶಿಸಿದ್ದಾನೆ. ಆರಂಭದಲ್ಲಿ ಆಕೆಗೆ ಏನಾಗುತ್ತಿದೆ ಎಂಬ ಅರಿವು ಇರಲಿಲ್ಲ. ಅರಿವಾದಾಗ ಸಹಾಯಕ್ಕಾಗಿ ಕೋರಿದರೂ ಯಾರು ಸಹಾಯ ಮಾಡಲಿಲ್ಲ ಎಂದು ಆಕೆಯ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಬಿಎಂಆರ್ ಸಿಎಲ್ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಇದುವರೆಗೂ ಯಾವುದೇ ರೀತಿಯ ದೂರು ಬಂದಿಲ್ಲ. ಆದರೂ ಕೂಡ ಸಿಸಿಟಿವಿ ಕ್ಯಾಮರಾ ಮೂಲಕ ವ್ಯಕ್ತಿಯನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

More News