ಬೆಂಗಳೂರು : ರಾಜ್ಯದಲ್ಲಿ ಜಾತಿ ಜನಗಣತಿ ವರದಿ ಅನುಷ್ಠಾನ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿರುವ ಮಧ್ಯೆಯೇ, ಪರ- ವಿರೋಧವೂ ವ್ಯಕ್ತವಾಗಿದೆ. ಮುಂಬರುವ ದಿನಗಳಲ್ಲಿ ಇದೊಂದು ವಿವಾದದ ಕೇಂದ್ರ ಬಿಂದುವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇದರ ನಡುವೆಯೇ ಜಾತಿ ಜನಗಣತಿ ವರದಿಯ ಮೂಲಪ್ರತಿಯೇ ಕಾಣೆಯಾಗಿದೆ ಎನ್ನಲಾಗಿದ್ದು, ಈ ವಿಚಾರವಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಜಾತಿ ಗಣತಿಯ ವರದಿಗೆ ಸಂಬಂಧಿಸಿದಂತೆ ಮೂಲ ವರದಿ ಅಥವಾ ಹಸ್ತಪ್ರತಿ ಸೀಲ್ಡ್ ಬಾಕ್ಸ್ ನಲ್ಲಿ ಲಭ್ಯವಿಲ್ಲದೇ ಇರುವುದರಿಂದ ಸದರಿ ಹಸ್ತಪ್ರತಿಯನ್ನು ಆಯೋಗಕ್ಕೆ ಕೂಡಲೇ ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗೆ ಸೂಚಿಸಲಾಗಿದೆ ಎಂದು ಜಯಪ್ರಕಾಶ್ ಹೆಗ್ಡೆ ಅವರು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ನಮೂದಿಸಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 ಅಂದರೆ ಜಾತಿಗಣತಿ ವರದಿಯನ್ನು 2021ರ ಅಗಸ್ಟ್ 26ರಂದು ಹಿಂದುಳಿದ ವರ್ಗಗಳ ಆಯೋಗದ ಕಚೇರಿಯಲ್ಲಿ ಇರಿಸಲಾಗಿತ್ತು. ವರದಿಯ ಸೀಲ್ಡ್ ಬಾಕ್ಸ್ ಗಳನ್ನು ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿಯವರ ಸಮ್ಮುಖದಲ್ಲಿ ಮಹಜರ್ ನಡೆಸಿ 2021 ರ ಅಕ್ಟೋಬರ್ 5ರಂದು ತೆರೆಯಲಾಗಿತ್ತು. ಆದರೆ, ಮುದ್ರಿತ ಮುಖ್ಯ ವರದಿಯಲ್ಲಿ ಸದಸ್ಯ ಕಾರ್ಯದರ್ಶಿಯವರ ಸಹಿ ಇರುವುದಿಲ್ಲ ಎಂದು ಹೆಗ್ಡೆ ಅವರು ಸರ್ಕಾರಕ್ಕೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಯಾವುದೇ ಡೇಟಾ ಮಿಸ್ ಆಗಿಲ್ಲಾ
ಈ ವಿಚಾರ ಸಂಬಂಧ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರು ಪ್ರತಿಕ್ರಿಯೆ ನೀಡಿದ್ದು,. ಡೇಟಾ ಎಲ್ಲವೂ ಇದೆ ಯಾವುದೇ ಡೇಟಾ ಮಿಸ್ ಅಗಿಲ್ಲ, ಡೇಟಾ ಸಾಪ್ಟ್ ವೇರ್ ನಲ್ಲೂ ಇದೆ. ಹಾಗೆಯೇ ಅದು ಪ್ರತಿ ಜಿಲ್ಲಾಧಿಕಾರಿಗಳ ಬಳಿಯೂ ಡೆಟಾ ಇದೆ. ಈ ಹಿಂದೆ ಸಿದ್ದಪಡಿಸಿದ್ದ ಮೂಲ ಪ್ರತಿ ಇಲ್ಲಾ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅದು ಚರ್ಚೆ ಮಾಡುವ ವಿಷಯವೇ ಅಲ್ಲಾ, ವಿವಾದವೂ ಅಲ್ಲಾ, ಡೇಟಾ ಆಧರಿಸಿ ನಾವು ವರದಿ ಸಿದ್ದಪಡಿಸುತ್ತೇವೆ. ಸಿದ್ದಪಡಿಸುವ ಪ್ರಕ್ರಿಯೆ ಈಗಲೂ ನಡೆಯುತ್ತಿದೆ, ಹಿಂದಿನ ಅಧ್ಯಕ್ಷರು ನೀಡಿದ್ದ ವರ್ಕ್ ಶೀಟ್ ಬಗ್ಗೆ ಮಾತ್ರ ನಾವು ಸರ್ಕಾರಕ್ಕೆ ಪತ್ರ ಬರೆದಿದ್ದೇವು ಎಂದು ಅವರು ತಿಳಿಸಿದ್ದಾರೆ.
ವರದಿ ಸಲ್ಲಿಸಲು ಆಯೋಗಕ್ಕೆ ಒಂದು ತಿಂಗಳ ಕಾಲಾವಕಾಶ
ಜಾತಿ ಜನಗಣತಿ ವರದಿ ಸಲ್ಲಿಸಲು ಆಯೋಗಕ್ಕೆ ಒಂದು ತಿಂಗಳು ಹೆಚ್ಚುವರಿ ಅವಧಿ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜಯಪ್ರಕಾಶ್ ಹೆಗ್ಡೆ, ಅದರ ಬಗ್ಗೆ ನೋ ಕಮೆಂಟ್ಸ್ ಎಂದು ಹೇಳಿದ ಅವರು, ನನ್ನ ಸರ್ಕಾರದ ನಡುವೆ ನಡೆದ ಮಾತುಕತೆ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದರು.
ಡೇಟಾ ಮಿಸ್ ಆಗಿದೆ ಎಂದು ಯಾರೂ ತಪ್ಪು ತಿಳುವಳಿಕೆ ಮೂಡಿಸುವುದು ಬೇಡ ಎಂದು ಸ್ಪಷ್ಟಪಡಿಸಿದ ಅವರು, ಡೇಟಾ ನಮ್ಮ ಸಾಫ್ಟ್‌ವೇರ್ ನಲ್ಲಿ ಹಾಗೆಯೇ ಇದೆ, ಅದರ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದರು.
ಅಧಿಕಾರಿಗೂ ಪತ್ರ ಬರೆದ ಆಯೋಗ
ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು, ಅಂದು ಸದಸ್ಯ ಕಾರ್ಯದರ್ಶಿಯಾಗಿದ್ದ ಅಧಿಕಾರಿಗೆ ಪತ್ರ ಬರೆದು ಅವರ ಗಮನಕ್ಕೂ ವಿಷಯ ತರಲಾಗಿದೆ. ಈ ಹಿನ್ನೆಲೆಯಲ್ಲಿ ಅಂದು ಸದಸ್ಯ ಕಾರ್ಯದರ್ಶಿಯಾಗಿದ್ದ ಡಾ. ಎನ್ ವಿ ಪ್ರಸಾದ್ ಅವರಿಗೆ ಪತ್ರ ಬರೆಯಲಾಗಿದೆ.
ಈ ಪತ್ರಕ್ಕೆ ಒಂದು ವಾರದಲ್ಲಿ ಉತ್ತರ ನೀಡದಿದ್ದಲ್ಲಿ ಆಯೋಗದ ಮುಖ್ಯ ವರದಿಯ ತಯಾರಿಕೆ ವಿವರ ಮತ್ತು ಮುದ್ರಿತ ಮುಖ್ಯ ವರದಿಗೆ ಸಹಿ ಇಲ್ಲದೇ ಇರುವುದು ತಮ್ಮ ಗಮನಕ್ಕೆ ಬಂದಿರುತ್ತದೆ. ಆದಾಗ್ಯೂ ತಮಗೆ ಸಹಮತವಿಲ್ಲದೆ ಸಹಿ ಮಾಡಿರುವುದಿಲ್ಲ ಎಂದು ಪರಿಗಣಿಸಲಾಗುವುದು ಎಂಬುದಾಗಿ ಪತ್ರದಲ್ಲಿ ತಿಳಿಸಲಾಗಿದೆ.




