ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಅಮಿತ್ ಶಾ, ಸಂತೋಷ್ ಜಿ, ರಾಜ್ಯದ ಪ್ರಮುಖ ನಾಯಕರಾದ ಬಿ ಎಸ್ ಯಡಿಯೂರಪ್ಪ, ಬೊಮ್ಮಾಯಿ ಎಲ್ಲರೂ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿ ನಮ್ಮನ್ನ ಆಯ್ಕೆ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಸ್ಪಷ್ಟನೆ ನೀಡಿದ್ದಾರೆ.
ಪಕ್ಷದ ಅಧ್ಯಕ್ಷ ಮತ್ತು ಪ್ರತಿಪಕ್ಷದ ನಾಯಕರ ಆಯ್ಕೆ ಬಿ ಎಸ್ ಯಡಿಯೂರಪ್ಪ ಅವರ ಒತ್ತಡಕ್ಕೆ ಮಣಿದು ಆಗಿದೆ ಎಂಬ ಪಕ್ಷದಲ್ಲಿನ ಅನೇಕ ಮುಖಂಡರು ಅಸಮಾಧಾನಕ್ಕೆ ಆರ್ ಅಶೋಕ್ ಬೆಂಗಳೂರಿನಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ.
ಎಲ್ಲರ ಒಮ್ಮತದಿಂದ ವಿಜಯೇಂದ್ರ ರಾಜ್ಯಾಧ್ಯಕ್ಷ, ನನ್ನ ವಿಪಕ್ಷ ನಾಯಕ ಮಾಡಿದ್ದಾರೆ. ಕೊಠಡಿ ಪೂಜೆ ಮಾಡಿ ಅಧಿಕೃತವಾಗಿ ವಿಪಕ್ಷ ನಾಯಕನಾಗಿದ್ದೇನೆ ಎಂದು ಸಮಜಾಯಿಸಿ ನೀಡಿದ್ದಾರೆ.
ಕರ್ನಾಟಕದಲ್ಲಿ ಆಡಳಿತಕ್ಕೆ ಬಂದ ಆರು ತಿಂಗಳಲ್ಲಿ ಟ್ರಾನ್ಸ್‌ಫರ್ ದಂಧೆ, ಬರ, ಸ್ವಜನ ಪಕ್ಷಪಾತ ನಡೆಯುತ್ತಿದೆ. ಇದನ್ನ ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳುತ್ತೇವೆ. ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇವೆ, ಅಧಿವೇಶನದ ಬಳಿಕ ಟ್ರಾನ್ಸ್‌ಫರ್ ದಂಧೆ, ಐಟಿ ದಾಳಿಯಲ್ಲಿ ಹಣ ಪತ್ತೆ ವಿವಿಧ ವಿಚಾರ ಇಟ್ಟುಕೊಂಡು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಯಾರೂ ಕೇಳದ ಕಾಂತರಾಜ ಆಯೋಗ ವರದಿ ಸಿಎಂ ಸಿದ್ದರಾಮಯ್ಯ ಮಾಡಿಸಿದ್ದರು.
ಕಾಂತರಾಜ ಆಯೋಗ ವರದಿ ಸಿದ್ದಪಡಿಸಲು ಆಯೋಗವನ್ನು ಅಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು. ಇದನ್ನು ಯಾರೂ ಕೇಳಿರಲಿಲ್ಲ. ಏಕಾಏಕಿ ಸಿದ್ದರಾಮಯ್ಯ ಅವರು ಮಾಡಿದ್ದರು. ಹತ್ತು ವರ್ಷ ಹಳೆಯ ವರದಿ ಇದು ಎಂದು ಹೇಳಿದ್ದಾರೆ.
ವರದಿಗೆ ಸೆಕ್ರೆಟರಿ ಇದಕ್ಕೆ ಸಹಿ ಹಾಕಬೇಕು. ನಮ್ಮಸರ್ಕಾರ ಇದ್ದಾಗ ಸಹಿಯೂ ಹಾಕಿರಲಿಲ್ಲ. ಈಗ ಮೂಲ ಪ್ರತಿಯೇ ಕಳೆದಿದೆ. 168 ಕೋಟಿ ಹಣ ಕೊಟ್ಟು ತಯಾರಾದ ವರದಿ ಕಾಣೆಯಾಗಿದೆ. ಸರ್ಕಾರ ಯಾಕೆ ತನಿಖೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಸರ್ಕಾರ ಏನೋ ಮುಚ್ಚಿಡುವ, ಕಾಪಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಇದರ ತನಿಖೆ ಆಗಬೇಕು. ವರದಿ ಏನಿದೆ ಜನಸಂಖ್ಯೆ ಆಧಾರದಲ್ಲಿ ಸಮೀಕ್ಷೆ ಆಗಬೇಕು. ಸರಿಯಾದ ಮಾನದಂಡ ಉಪಯೋಗಿಸಿ ತನಿಖೆ ಮಾಡಿ. ಈಗಾಗಲೇ ಒಕ್ಕಲಿಗ, ಲಿಂಗಾಯತರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಕಾಂತರಾಜ ಆಯೋಗ ವರದಿಗೆ ಸಹಿಯೇ ಹಾಕಿಲ್ಲ ಅಂದರೆ ಆ ವರದಿಯನ್ನು ಎಲ್ಲಿ ಕೂತು, ಯಾರ ಮನೆಯಲ್ಲಿ ಕೂತು ಬರೆದಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಸಹಿ ಹಾಕುವ ಪರಿಜ್ಞಾನ ಇಲ್ಲ ಅಂದ್ರೆ, ನಿಮ್ಮ ವರದಿಗೆ ಬೆಲೆ ಇಲ್ಲ ಎಂದರು.




