ಹುಬ್ಬಳ್ಳಿ: ಸೈಬರ್ ವಂಚನೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸಾಮಾಜಿಕ ಜಾಲತಾಣ ಬಳಕೆ ಮಾಡಿಕೊಂಡು ವಂಚನೆ ಮಾಡುವ ವಂಚಕರ ಜಾಲ ದಿನಕಳೆದಂತೆ ವೃದ್ಧಿಸುತ್ತಲೇ ಇದೆ. ವಿಡಿಯೋ ಕಾಲ್ ಮೂಲಕ ವ್ಯಕ್ತಿ ಮುಖವನ್ನು ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡುವ ವಂಚಕರು ಜನರನ್ನು ವಂಚನೆ ಮಾಡುತ್ತಿದ್ದಾರೆ.

ಹೀಗೆ ಕೈಯಲ್ಲಿ ಮೊಬೈಲ್ ಹಿಡಿದಿರುವ ಈ ವ್ಯಕ್ತಿ ಹುಬ್ಬಳ್ಳಿಯವರು. ಅಪರಿಚಿತ ಮಹಿಳೆಯೊಬ್ಬಳು ಸೋಶಿಯಲ್ ಮೀಡಿಯಾ ಮೂಲಕ ಪರಿಚಯ ಮಾಡಿಕೊಂಡು ವಿಡಿಯೋ ಕಾಲ್ ಮಾಡಿ ಸುಮಾರು 2.40 ಲಕ್ಷ ವಂಚನೆ ಮಾಡಿದ್ದಾರೆ.

ವಿಡಿಯೋ ಕಾಲ್ ಮಾಡಿ ನಗ್ನ ದೃಶ್ಯ ತೋರಿಸಿ ನಂತರ ಪೊಲೀಸ್ ಹೆಸರಲ್ಲಿ ಹಾಗೂ ಯುಟೂಬರ್ ಹೆಸರಲ್ಲಿ ಬೆದರಿಕೆ ಹಾಕಿ ನಾಲ್ಕು ಕಂತುಗಳಲ್ಲಿ ಸುಮಾರು 2.40 ಲಕ್ಷ ಹಣವನ್ನು ಹಾಕಿಸಿಕೊಂಡು ವಂಚನೆ ಮಾಡಿದ್ದಾರೆ. ವಂಚನೆಗೆ ಒಳಗಾದ ಹುಬ್ಬಳ್ಳಿಯ ವ್ಯಕ್ತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇನ್ನೂ ದತ್ತಾತ್ರೇಯ ಎಂಬುವವರಿಗೆ ಸೋಶಿಯಲ್ ಮಿಡಿಯಾ ಮೂಲಕ ಪರಿಚಯ ಮಾಡಿಕೊಂಡು ವಿಡಿಯೋ ಕಾಲ್ ನಲ್ಲಿ ನಗ್ನ ದೃಶ್ಯಗಳನ್ನು ತೋರಿಸಿ ವಂಚನೆ ಮಾಡಿದ್ದಾರೆ. ವಿಡಿಯೋಗಳನ್ನು ನ್ಯೂಸ್ ಚಾನಲ್ ಗಳಿಗೆ ನೀಡುತ್ತೇನೆ. ನಿನ್ನ ಜೀವನ ಹಾಳು ಮಾಡುತ್ತೇನೆ ಎಂದು ವಂಚಕರು ಚಾಟಿಂಗ್ ಕೂಡ ಮಾಡಿದ್ದಾರೆ. ಅಲ್ಲದೇ ದೆಹಲಿ ಪೊಲೀಸರ ಹೆಸರಲ್ಲಿ ಮಾತನಾಡಿದ ವಂಚಕರು 2.40 ಲಕ್ಷ ಹಣವನ್ನು ಜಮಾ ಮಾಡಿಸಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.




