IND v AUS: ಏಕದಿನ ವೈಫಲ್ಯದ ನಡುವೆಯೂ ಟಿ20ಯಲ್ಲಿ ಛಾಪು ಮೂಡಿಸಿದ ಸೂರ್ಯಕುಮಾರ್‌

ಬೆಂಗಳೂರು: ಏಕದಿನ ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಸೂರ್ಯಕುಮಾರ್‌ ಯಾದವ್‌, ಟಿ20 ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮತ್ತೊಮ್ಮೆ ತಮ್ಮ ಛಾಪು ಮೂಡಿಸಿದ್ದಾರೆ.

ಇತ್ತೀಚೆಗೆ ನಡೆದ ಏಕದಿನ ವಿಶ್ವಕಪ್‌ನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುವಲ್ಲಿ ಎಡವಿದ್ದ ಸೂರ್ಯಕುಮಾರ್‌, ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ನಲ್ಲಿ ಉತ್ತಮ ಬ್ಯಾಟಿಂಗ್‌ನಿಂದ ತಂಡಕ್ಕೆ ಆಸರೆಯಾಗುವಲ್ಲಿ ವೈಫಲ್ಯ ಕಂಡಿದ್ದರು. ಸೂರ್ಯಕುಮಾರ್‌ ಅವರ ಈ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಈ ನಡುವೆ ರೋಹಿತ್‌ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಆಸೀಸ್‌ ವಿರುದ್ಧದ ಟಿ20 ಸರಣಿಗೆ ಸೂರ್ಯಕುಮಾರ್‌ ಅವರಿಗೆ ತಂಡದ ನಾಯಕತ್ವ ಕೂಡ ನೀಡಲಾಗಿತ್ತು.

ಹೀಗಾಗಿ ಸೂರ್ಯಕುಮಾರ್‌ ಅವರ ಪ್ರದರ್ಶನದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಲಾಗಿತ್ತು. ಅದರಂತೆ ವಿಶಾಖಪಟ್ಟಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20ಯಲ್ಲಿ ಜವಾಬ್ದಾರಿಯ ಆಟವಾಡಿದ ಸೂರ್ಯ, ಸ್ಪೋಟಕ ಬ್ಯಾಟಿಂಗ್‌ನ ಮೂಲಕ 42 ಬಾಲ್‌ಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸ್‌ ಮೂಲಕ 80 ರನ್‌ಗಳಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಆಸೀಸ್‌ ವಿರುದ್ಧ ಈ ಇನ್ನಿಂಗ್ಸ್‌ನ ಮೂಲಕ ಟಿ20 ಕ್ರಿಕೆಟ್‌ನ ನಂ.1 ಬ್ಯಾಟರ್‌ ಆಗಿರುವ ಸೂರ್ಯಕುಮಾರ್‌ ಯಾದವ್‌, ಚುಟುಕು ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಕೈ ಬ್ಯಾಟಿಂಗ್‌ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಹಲವು ಕ್ರಿಕೆಟ್‌ ಅಭಿಮಾನಿಗಳು, ಸೂರ್ಯಕುಮಾರ್‌ ಯಾದವ್‌, ಏಕದಿನ ಕ್ರಿಕೆಟ್‌ ಬದಲಾಗಿ ಟಿ20 ಕ್ರಿಕೆಟ್‌ನ ಬಗ್ಗೆ ಹೆಚ್ಚಿನ ಗಮನವಹಿಸ ಕಣಕ್ಕಿಳಿಯಲಿ ಎಂಬ ಸಲಹೆಗಳನ್ನ ಮುಂದಿಟ್ಟಿದ್ದಾರೆ. ಅಲ್ಲದೇ ಮುಂಬರುವ 2024ರ ಟಿ20 ವಿಶ್ವಕಪ್‌ ಟೂರ್ನಿಗೆ ಉತ್ತಮ ಸಿದ್ಧತೆ ಮಾಡಿಕೊಳ್ಳಲಿ ಎಂಬ ಬಗ್ಗೆಯೂ ಸಲಹೆಗಳನ್ನ ನೀಡಿದ್ದಾರೆ.

ಸೂರ್ಯಕುಮಾರ್‌ ಪ್ರದರ್ಶನ – ಟಿ20ಯಲ್ಲಿ

ಪಂದ್ಯಗಳು – 54
ರನ್‌ಗಳು – 1921
ಸರಾಸರಿ – 46.85
ಸ್ಟ್ರೈಕ್‌ ರೇಟ್‌ – 173.38
50/100 – 16/3
ಗರಿಷ್ಠ ಸ್ಕೋರ್‌ – 117

ಸೂರ್ಯಕುಮಾರ್‌ ಪ್ರದರ್ಶನ – ಏಕದಿನ ಕ್ರಿಕೆಟ್‌ನಲ್ಲಿ
ಪಂದ್ಯಗಳು – 37
ರನ್‌ಗಳು – 773
ಸರಾಸರಿ – 25.77
ಸ್ಟ್ರೈಕ್‌ ರೇಟ್‌ – 105.03
50/100 – 4/0
ಗರಿಷ್ಠ ಸ್ಕೋರ್‌ – 72

More News