IPL 2024: ಐಪಿಎಲ್‌-2024ಕ್ಕೆ ತಯಾರಿ ಶುರು; ಗುಜರಾತ್‌ ಬದಲು ಮುಂಬೈ ಪರ ಹಾರ್ದಿಕ್‌ ಕಣಕ್ಕೆ?

ಬೆಂಗಳೂರು: ಏಕದಿನ ವಿಶ್ವಕಪ್‌ ಮುಕ್ತಾಯಗೊಂಡ ಬೆನ್ನಲ್ಲೇ ಇಂಡಿಯನ್‌ ಪ್ರೀಮಿಯರ್‌ ಲೀಗ್‌-2024ರ ಸಿದ್ಧತೆಗಳು ಆರಂಭಗೊಂಡಿದ್ದು, ಹಲವು ಫ್ರಾಂಚೈಸಿಗಳು ಮಹತ್ವದ ಬದಲಾವಣೆಯೊಂದಿಗೆ 2024ರ ಐಪಿಎಲ್‌ ಟೂರ್ನಿಯಲ್ಲಿ ತಮ್ಮ ತಂಡದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿವೆ.

ಪ್ರಮುಖವಾಗಿ 2024ರ ಐಪಿಎಲ್‌ ಟೂರ್ನಿಗೆ ಸಾಕಷ್ಟು ಆಟಗಾರರು ಈ ಹಿಂದಿನ ಆವೃತ್ತಿಯಲ್ಲಿ ಆಡಿದ್ದ ತಂಡಗಳ ಬದಲಾಗಿ ಹೊಸ ತಂಡದ ಪರವಾಗಿ ಆಡುವ ಸಾಧ್ಯತೆ ಹೆಚ್ಚಾಗಿದೆ. ಇದರ ಪ್ರಮುಖ ಬೆಳವಣಿಗೆ ಎಂಬಂತೆ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, 2024ರ ಐಪಿಎಲ್‌ನಲ್ಲಿ ತಮ್ಮ ಹಳೆಯ ತಂಡ ಮುಂಬೈ ಇಂಡಿಯನ್ಸ್‌ ಪರವಾಗಿ ಆಡಲು ಸಿದ್ಧರಾಗಿದ್ದಾರೆ.
ಸದ್ಯ ಈ ವಿಷಯ ಕ್ರಿಕೆಟ್‌ ವಲಯದಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಒಂದೊಮ್ಮೆ ಈ ಬೆಳವಣಿಗೆ ನಿಜವೇ ಆದಲ್ಲಿ ಕಳೆದ ಎರಡು ಸೀಸನ್‌ಗಳಲ್ಲಿ ಗುಜರಾತ್‌ ಟೈಟನ್ಸ್‌ ತಂಡವನ್ನ ಮುನ್ನಡೆಸಿದ್ದ ಹಾರ್ದಿಕ್‌, ಮತ್ತೊಮ್ಮೆ ಮುಂಬೈ ತಂಡಕ್ಕಾಗಿ ಆಡಲಿದ್ದಾರೆ.

ಒಂದೊಮ್ಮೆ ಹಾರ್ದಿಕ್‌ ಪಾಂಡ್ಯ ಮುಂಬೈ ಇಂಡಿಯನ್ಸ್‌ ಪರವಾಗಿ 2024ರ ಐಪಿಎಲ್‌ನಲ್ಲಿ ಆಡಿದರೆ, ಇದರ ಬದಲಾಗಿ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ಗುಜರಾತ್‌ ಟೈಟನ್ಸ್‌ ತಂಡಕ್ಕೆ 15 ಕೋಟಿ ರೂ. ಹಣವನ್ನ ಪಾವತಿಸಬೇಕಾಗುತ್ತಿದೆ. ನಿರೀಕ್ಷೆಯಂತೆ ಈ ಟ್ರೇಡ್‌ ನಡೆದರೆ ಇದು ಐಪಿಎಲ್‌ ಇತಿಹಾಸದಲ್ಲಿ ನಡೆದ ಅತಿದೊಡ್ಡ ಟ್ರೇಡ್‌ ಆಗಲಿದೆ.

ಮುಂದಿನ ತಿಂಗಳು ಮಿನಿ ಹರಾಜು:

ಐಪಿಎಲ್ 2024ಕ್ಕೆ ಎಲ್ಲಾ ಫ್ರಾಂಚೈಸಿಗಳು ತಯಾರಿ ಆರಂಭಿಸಿರುವ ಬೆನ್ನಲ್ಲೇ ಮುಂದಿನ ತಿಂಗಳು ಮಿನಿ ಹರಾಜು ನಡೆಯಲಿದೆ. ಆದರೆ ಇದಕ್ಕೂ ಮೊದಲು, ಪ್ರತಿ ಬಾರಿಯಂತೆ ಎಲ್ಲಾ 10 ಫ್ರಾಂಚೈಸಿಗಳಿಗೆ ಟ್ರೇಡ್ ವಿಂಡೋ ತೆರೆದಿರುತ್ತದೆ, ಇದರಲ್ಲಿ ಫ್ರಾಂಚೈಸಿ ಪರಸ್ಪರ ಆಟಗಾರರನ್ನು ವಿನಿಮಯ ಮಾಡಿಕೊಳ್ಳಬಹುದು. ಟ್ರೇಡ್ ವಿಂಡೋ ನವೆಂಬರ್ 26 ರಂದು ಕೊನೆಗೊಳ್ಳುತ್ತದೆ. ಈ ಬಾರಿಯ ಹರಾಜಿನಲ್ಲಿ ಸಾಕಷ್ಟು ಆಟಗಾರರು ಲಭ್ಯವಿರಲಿದ್ದು, ಪ್ರಮುಖವಾಗಿ ಏಕದಿನ ವಿಶ್ವಕಪ್‌ ಕಾರಣದಿಂದಾಗಿ 2023ರ ಐಪಿಎಲ್‌ನಿಂದ ಹೊರಗುಳಿದಿದ್ದ ಆಸ್ಟ್ರೇಲಿಯಾ, ಇಂಗ್ಲೆಂಡ್‌ ಹಾಗೂ ನ್ಯೂಜಿ಼ಲೆಂಡ್‌ ತಂಡಗಳ ಹಲವು ಆಟಗಾರರು 2024ರ ಐಪಿಎಲ್‌ನಲ್ಲಿ ಆಡಲಿದ್ದಾರೆ.

ಪ್ರಮುಖವಾಗಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಹಲವು ಆಟಗಾರರು 2024ರ ಐಎಪಿಲ್‌ನ ಮಿನಿ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಖರೀದಿಯಾಗುವ ನಿರೀಕ್ಷೆ ಕೂಡ ಇದೆ. ಹೀಗಾಗಿ ಇವರುಗಳ ಖರೀದಿಗೆ ಫ್ರಾಂಚೈಸಿಗಳು ಪ್ರಬಲ ಪೈಪೋಟಿ ನಡೆಸುವ ನಿರೀಕ್ಷೆ ಇದೆ.

More News