ಬೆಂಗಳೂರು: ಈ ಹಿಂದೆ ಪ್ರತ್ಯೇಕ ಧರ್ಮ ವಿಚಾರದಲ್ಲಿ ಆಗಿತ್ತಲ್ಲ ಅದೇ ರೀತಿ, ಲೋಕಸಭಾ ಚುನಾವಣೆಗೆ ಜಾತಿ ಜನಗಣತಿ ವಿಚಾರ 100% ತೊಂದರೆ ಕೊಡುತ್ತೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಭವಿಷ್ಯ ನುಡಿದಿದ್ದಾರೆ.
ಜಾತಿ ಗಣತಿ ಬಿಡುಗಡೆ ಮಾಡಿಯೇ ಸಿದ್ಧ ಎಂಬ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಗೋಷ್ಠಿ ಕರೆದು, ಬರೀ ಲಿಂಗಾಯತ ಅಂತ ಹೋದವರೆಲ್ಲ ಮಣ್ಣು ಕಚ್ಚಿದ್ರು ಎಂದು ಸರ್ಕಾರದ ವಿರುದ್ಧ ಟೀಕಿಸಿದರು.
ಜಾತಿ ಗಣತಿಯ ಮೂಲ ವರದಿ ನಾಪತ್ತೆ ಆಗಿದೆ. ನಾನು ಕೊಟ್ಟಿದ್ದೀನಿ ಅಂತ ಕಾಂತರಾಜ್ ಹೇಳ್ತಿದ್ದಾರೆ. ಇದು ನೋಡೋಕೆ ಮಜಾ ಐತಿ. ಆಯೋಗದ ಅಧ್ಯಕ್ಷರ ಅವಧಿ ವಿಸ್ತರಣೆ ಆಗಿದೆ. ಗಣತಿ ಮಾಡಿ, ಮನೆ ಮನೆಗೆ ಹೋಗಿ ಸಮಿಕ್ಷೆ ಮಾಡಿ. ಎಲ್ಲೋ ಕೂತು ಗಣತಿ ಮಾಡುವುದಲ್ಲ. ಸರಿಯಾದ ರೀತಿಯಲ್ಲಿ ಜಾತಿಗಣತಿ ಆಗಿಲ್ಲ ಎಂದು ದೂರಿದರು. ಲೋಕಸಭಾ ಚುನಾವಣೆಗೆ ಜಾತಿ ಜನಗಣತಿ ಹಿನ್ನೆಡೆಯಾಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಾಮನೂರು ಶಿವಶಂಕರಪ್ಪ, 100% ತೊಂದರೆ ಆಗುತ್ತೆ. ಹಿಂದೆ ಪ್ರತ್ಯೇಕ ಧರ್ಮ ವಿಚಾರದಲ್ಲಿ ಆಗಿತ್ತಲ್ಲ ಅದೇ ರೀತಿ ಎಂದರು.
ಬಸವರಾಜರಾಯರೆಡ್ಡಿ ಹೇಳಿಕೆಗೆ ತರಾಟೆ ತೆಗೆದುಕೊಂಡ ಅವರು, ಅವನು ಹಿಂದೆ ಹೀಗೆ ಏನೇನೊ ಮಾತಾಡ್ತಿದ್ದ.
ಅವನು ಕ್ಯಾಬಿನೆಟ್ ಹೊರಗಿದ್ದಾನೆ. ಅದಕ್ಕೆ ಏನೋನೊ ಮಾತಾಡ್ತಿದ್ದಾನೆ. ಬರಿ ಲಿಂಗಾಯತ ಅಂತ ಹೋದವರೆಲ್ಲ ಮಣ್ಣು ಕಚ್ಚಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜಾತಿ ಜನಗಣತಿ ವರದಿ ಸರಿ ಇಲ್ಲ. ವೈಜ್ಞಾನಿಕವಾಗಿ ಸಮೀಕ್ಷೆ ಆಗಬೇಕು. ಅವರು ಏನು ಮಾಡ್ತಾರೊ ನೋಡ್ಬೇಕಿದೆ. ಅವರು ತೆಗೆದುಕೊಂಡ ಬಳಿಕ ಏನು ಮಾಡ್ಬೇಕು ನೋಡ್ತೀವಿ. ಲೋಪದಿಂದ ಕೂಡಿದೆ ಅಂತಲೇ ನಾವು ವಿರೋಧ ಮಾಡ್ತಾ ಇದ್ದೀವಿ. ವರದಿಯಲ್ಲಿ ಏನಿದೆ ಅಂತ ಅದೆಲ್ಲ ಲೀಕ್ ಆಗಿದೆ. ಲಿಂಗಾಯದ ವೀರಶೈವ ಅಂತ ಬರೆದುಕೊಂಡೇ ಇಲ್ಲ. ಅನೇಕ ಲೋಪದೋಷಗಳು ಎದ್ದು ಕಾಣುತ್ತಿದೆ. ಈ ಸಮಿಕ್ಷೆಯ ವರದಿಗೆ ಎಲ್ಲರ ವಿರೋಧವಿದೆ ಎಂದರು
ನಾವೂ ಸಹ ಸಿಎಂ ಭೇಟಿ ಮಾಡ್ತೀವಿ. ಒಕ್ಕಲಿಗರ ಸಮುದಾಯದ ರೀತಿಯೇ ಸಹಿ ಮಾಡಿ ವಿರೋಧ ವ್ಯಕ್ತಪಡಿಸುತ್ತೇವೆ. ಬಿಜೆಪಿ, ಜೆಡಿಎಸ್ ನವರೂ ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಮೌಕಿಕವಾಗಿ ಸಿಎಂ ಬಳಿ ಚರ್ಚೆ ನಡೆಸಿದ್ದೇವೆ. ನೋಡೋಣ ತಡಿಯಪ್ಪ ಅಂತ ಹೇಳಿದ್ದಾರೆ. ಜನಗಣತಿ ಮಾಡೋಕೆ ಇವರಿಗೆ ಪವರ್ ಇಲ್ಲ ಅಂತ ಜೋಶಿ ಹೇಳಿದ್ದಾರೆ. ಯಾರು ವಿರೋಧ ಮಾಡ್ತಾರೊ ಅದನ್ನ ಸಿಎಂ ಬೇಕು ಅಂತಾರೆ ಮುಂದೆ ಕಾದು ನೋಡ್ತೇವೆ ಎಂದು ತಿಳಿಸಿದರು.




