ತುಮಕೂರು : ಸಾಲದಬಾಧೆ ಸಹಿಸಲಾರದೇ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಜಕ್ಕೂ ಬಹಳ ನೋವುವನ್ನುಂಟು ಮಾಡುವ ವಿಷಯ ಇದಾಗಿದೆ. ಒಂದು ಕುಟುಂಬವೇ ಆತ್ಮಹತ್ಯೆ ಮಾಡಿಕೊಂಡಿದೆ. ಸಾಲ ತೀರಿಸಲು ಆಗಿಲ್ಲ. ಸಾಲ ನೀಡಿದವರು ಹಣ ಕಟ್ಟಲು ಒತ್ತಾಯ ಮಾಡುತ್ತಿದ್ದರು. ಕಟ್ಟಲು ಆಗುತ್ತಿರಲಿಲ್ಲ. ಆದ್ದರಿಂದ ಅವರು ಸಾಲ ಕೊಟ್ಟವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಮುಂದೆ ಏನು ಮಾಡಬೇಕು ಅಂತ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದ ಅವರು, ಮುಖ್ಯಮಂತ್ರಿ ಅವರಿಗೆ ವಿಷಯ ತಿಳಿಸಿ ಅವರ ಆದೇಶದಂತೆ ಪರಿಹಾರ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಬಡ್ಡಿ ವ್ಯವಹಾರ ನಡೆಸುತ್ತಿದ್ದರು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ, ಅದನ್ನು ಗಂಭೀರವಾಗಿ ತೆಗದುಕೊಂಡು, ಬಡ್ಡಿ ವ್ಯವಹಾರವನ್ನು ನಿಲ್ಲಿಸಲು ಕ್ರಮತೆಗೆದುಕೊಳ್ಳುತ್ತೇವೆ. ಬಡ್ಡಿ ವ್ಯಬಹಾರ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ತನಿಖೆಯ ನಂತರ ಸತ್ಯಾಂಶ ತಿಳಿಯಲಿದೆ. ತನಿಖೆಯ ನಂತರ ಏನು ಕಾರಣ ಎಂಬುವುದು ಪತ್ತೆ ಹಚ್ಚಲಾಗುತ್ತದೆ. ಕಡಿಮೆ ಹಣಕ್ಕೆ ಐದು ಜನ ಸಾಯುವುದು ಸಾಮಾನ್ಯ ಸಂಗತಿ ಅಲ್ಲ. ತನಿಖೆಯ ನಂತರ ನಿಜ ಸ್ಥಿತಿ ತಿಳಿಯಲಿದೆ. ಮುಂದೆ ಜಿಲ್ಲೆ ಪಟ್ಟಣದಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುವವರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.
ಅಮಾಯಕರಿಗೆ ಸಾಲ ಕೊಟ್ಟು ಬಡ್ಡಿ ಪಡೆಯುವುದು ಜಾಸ್ತಿಯಾಗಿದೆ. ತನಿಖೆಯ ನಂತರ ಎಲ್ಲ ವಿಚಾರಗಳಲ್ಲಿ ಬಯಲಿಗೆ ಬರಲಿವೆ ಎಂದರು. ಇಂತಹ ಘಟನೆ ಮರುಕಳಿಸಬಾರದು. ಇದನ್ನು ತಡೆಯುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.
ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇದು ನನ್ನ ಗಮನಕ್ಕೆ ಬಂದಿಲ್ಲ. ಅಂತಹದು ಏನಾದರೂ ಇದ್ದರೆ ಗಮನಕ್ಕೆ ತಂದರೆ ತನಿಖೆ ನಡೆಸಲಾಗುವುದು. ಹಣ ನಮಗೆ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದ ಅವರು, ದಾಖಲೆಯೊಂದಿಗೆ ದೂರು ನೀಡಿದರೆ ತನಿಖೆ ಸಾಧ್ಯ ಎಂದು ಸ್ಪಷ್ಟನೆ ನೀಡಿದರು.




