ಬೆಂಗಳೂರು : ರಾಜ್ಯದ ನಿಗಮ ಮಂಡಳಿ ನೇಮಕಾತಿಯನ್ನು ವರಿಷ್ಠರು ಸೇರಿ ಪಟ್ಟಿಯನ್ನು ಅಂತಿಮಗೊಳಿಸಬಹುದು, ಆದರೆ, ಈ ಸಂಬಂಧ ನನ್ನ ಅಭಿಪ್ರಾಯ ಕೇಳಿಲ್ಲ.. ಕೇಳಿದ್ರೆ ಒಳ್ಳೆಯದಾಗಿತ್ತು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಹ ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷನಾಗಿದ್ದೆ, ರಾಜಕೀಯವಾಗಿ ಈ ಸಂದರ್ಭದಲ್ಲಿ ಯಾರನ್ನ ಮಾಡಿದ್ದರೇ ಅನುಕೂಲ ಆಗುತ್ತಿತ್ತು. ಹಿರಿಯರು ಯಾರು ಅನ್ನೋ ಮಾಹಿತಿ ತಮಗಿದೆ ಎಂದು ತಮ್ಮಲ್ಲಿನ ಅಸಮಾಧಾನವನ್ನು ಹೊರಹಾಕಿದರು.
ಅವರಿಗೂ ಗೊತ್ತಿದೆ, ನಮ್ಮನ್ನು ಕೇಳಿ ಮಾಡಿದ್ರೆ ಚೆನ್ನಾಗಿ ಇರುತ್ತಿತ್ತು, ಹೈಕಮಾಂಡ್ ಅನುಮತಿಯಿಂದ ಅವರು ಪಟ್ಟಿಯನ್ನು ಅಂತಿಮಗೊಳಿಸುತ್ತಿದ್ದಾರೆ, ಶಾಸಕರಿಗೆ, ಕಾರ್ಯಕರ್ತರಿಗೆ ಅಧಿಕಾರ ಹಂಚಿಕೆ ಆದರೆ ಒಳ್ಳೆಯದು ಎಂದು ಅಬಿಪ್ರಾಯಪಟ್ಟರು.

ರಾಜ್ಯ ಉಸ್ತುವಾರಿ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸೇರಿ ಪಟ್ಟಿ ಅಂತಿಮಗೊಳಿಸಲಿದ್ದಾರೆ, ಇಂದು ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಮಂಡ್ಯದಲ್ಲಿ ಕಬ್ಬಿನ ಗದ್ದೆಯ ಅಲೆಮನೆಯಲ್ಲಿ ಭ್ರೂಣ ಪತ್ತೆ ಮಾಡುತ್ತಿರುವ ಆರೋಪ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಈ ಸಂಬಂಧ ತನಿಖೆ ನಡೆಯುತ್ತಿದೆ, ತನಿಖೆ ಸಂಪೂರ್ಣ ಆಗಲಿ, ಯಾರ್ ಯಾರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ಬಹಿರಂಗವಾಗಲಿದೆ ಎಂದರು.
ಸಿಎಂ ಜನತಾ ಸ್ಪಂದನ ಕಾರ್ಯಕ್ರಮದಲ್ಲಿ ಗೃಹ ಇಲಾಖೆ ಸಮಸ್ಯೆಯೇ ಹೆಚ್ಚು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ನಡೆಸಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಗೃಹ ಇಲಾಖೆಯ ಸಮಸ್ಯೆಯೇ ಹೆಚ್ಚಾಗಿ ಕೇಳಿ ಬಂದಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಮೊದಲು ಪೊಲೀಸ್ ಠಾಣೆಗೆ ಹೋಗಲು ಹೆದರುತ್ತಿದ್ದರು, ಈಗ ಯಾರು ಬೇಕಾದರೂ ಪೊಲೀಸ್ ಠಾಣೆಗೆ ಹೋಗಬಹುದು, ದೂರು ಕೊಡಬಹುದು, ಕೊಟ್ಟ ನಂತರ ಎಫ್.ಐ.ಆರ್ ಮಾಡಬೇಕು ಎಂದು ನಾವು ಸೂಚನೆ ಕೊಟ್ಟಿದ್ದೇನೆ, ಅದಕ್ಕಾಗಿ ಹೆಚ್ಚೆಚ್ಚು ಜನ ಪೊಲೀಸ್ ಠಾಣೆಗಳಿಗೆ ಹೋಗುತ್ತಿದ್ದಾರೆ ಎಂದು ವಿವರಣೆ ನೀಡಿದರು.
ಅಪರಾಧಗಳು ಹೆಚ್ಚಾಗುತ್ತಿವೆ ಎಂದು ವಿಪಕ್ಷಗಳು ಬೊಬ್ಬೆ ಹೊಡೆಯುತ್ತಿವೆ, ಯಾಕೆ ಜಾಸ್ತಿಯಾಗುತ್ತಿವೆ ಎಂದರೆ ನಾವು ಅವರಿಗೆ ಅವಕಾಶ ಕೊಡುತ್ತಿದ್ದೇವೆ, ದೂರು ತೆಗೆದುಕೊಂಡು ತನಿಖೆ ಮಾಡುತ್ತಿದ್ದೇವೆ, ಲಾಜಿಕಲ್ ಎಂಡ್ ಗೆ ತೆಗೆದುಕೊಂಡು ಹೋಗುತ್ತಿದ್ದೇವೆ, ಅದರಿಂದ ಜನ ವಿಶ್ವಾಸದ ಮೇಲೆ ಠಾಣೆಗಳಿಗೆ ಬರುತ್ತಿದ್ದಾರೆ ಎಂದು ಹೇಳಿದರು.
ಮೊದಲು ಇವರು ಠಾಣೆಗಳಿಗೆ ಬರಲು ಬಿಡುತ್ತಿರಲಿಲ್ಲ, ದೂರು ಕೊಟ್ಟರೆ ಪರಿಗಣಿಸುತ್ತಿರಲಿಲ್ಲ, ನಮ್ಮಲ್ಲಿ ಸೈಬರ್ ಕೇಸ್ ಹೆಚ್ಚಾಗುತ್ತಿವೆ. ಯಾರಿಗೆ ಎಲ್ಲಿ ಹೋಗಬೇಕು ಎಂದು ಗೊತ್ತಿರಲಿಲ್ಲ. ಎಲ್ಲಾ ಠಾಣೆಗಳಲ್ಲಿ ಸೈಬರ್ ಕೇಸ್ ತೆಗೆದುಕೊಳ್ಳಿ ಎಂದು ಹೇಳಿದ್ದೇವೆ, ಪೊಲೀಸ್ ಸ್ಟೇಷನ್ ಗಳಲ್ಲಿ ದೂರು ತೆಗೆದುಕೊಂಡು ಬಳಿಕ ಸಂಬಂಧಿತ ಸ್ಟೇಷನ್ ಗಳಿಗೆ ರವಾನೆ ಆಗಲಿದೆ ಎಂದರು.




