ಬೆಂಗಳೂರು: ಮುಂಗಾರು ಮಳೆ ಬೆಡಗಿ ಕೊನೆಗೂ ಮದುವೆ ಆಗೋ ಮನಸ್ಸು ಮಾಡಿದ್ದಾರೆ. ತಮ್ಮ ಬಹು ಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೆಲ ವರ್ಷಗಳ ಹಿಂದೆ ಆನಂದ್ ಗೌಡ ಎಂಬುವವರೊಂದಿಗೆ ನಿಶ್ಚಿತಾರ್ಥ ಆಗಿತ್ತು. ಕೆಲ ದಿನಗಳ ವರೆಗಷ್ಟೇ ಇದ್ದ ಸಂಬಂಧ ಬಳಿಕ ಮುರಿದು ಬಿತ್ತು. ಇದೀಗ ಸ್ಯಾಂಡಲ್ ವುಡ್ ನಟಿ ಪೂಜಾ ಗಾಂಧಿ (40) ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರಂತೆ. ಹುಡುಗ ವಿಜಯ್ ಎಂಬುದು ತಿಳಿದು ಬಂದಿದ್ದು, ಬೆಂಗಳೂರಿನಲ್ಲಿ ಲಾಜೆಸ್ಟಿಕ್ ಕಂಪನಿ ಓನರ್ ಎನ್ನಲಾಗಿದೆ.

ಪ್ರಾರಂಭದಲ್ಲಿ ಒಳ್ಳೆ ಸ್ನೇಹಿತರಾಗಿದ್ದ ವಿಜಯ್ ಮತ್ತು ಪೂಜಾ ಗಾಂಧಿ, ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದಾರಂತೆ. ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿರುವ ನಟಿ ಪೂಜಾ ಗಾಂಧಿ, ಕನ್ನಡವನ್ನು ಕಲಿತು ಭೇಷ್ ಎನಿಸಿಕೊಂಡಿದ್ದರು. ಸಿನಿ ಮೂಲದ ಮಾಹಿತಿ ಪ್ರಕಾರ, ವಿಜಯ್ ಅವರೇ ಪೂಜಾ ಗಾಂಧಿಯವರಿಗೆ ಕನ್ನಡ ಕಲಿಸಿರೋದಾಗಿ ತಿಳಿದು ಬಂದಿದೆ.ಕನ್ನಡ ಕಲಿತು ಇದೀಗ ಕನ್ನಡಿಗನನ್ನು ಮದುವೆಯಾಗಿ ಪೂಜಾ ಗಾಂಧಿ ಕರ್ನಾಟಕದ ಸೊಸೆ ಆಗಲಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಮದುವೆ ವಿಚಾರ ದ ಕುರಿತು ನಟಿ ಇನ್ನೂ ಅಧಿಕೃತ ವಾಗಿ ಸ್ಪಷ್ಟನೆ ನೀಡಿಲ್ಲ. ಆದ್ರೆ ಮೂಲಗಳ ಪ್ರಕಾರ 29 ನವೆಂಬರ್ 2023ರಂದು ಬೆಂಗಳೂರಿನ ಯಲಹಂಕದಲ್ಲಿ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆ ನಡೆಯಲಿದೆ ಎಂಬ ಮಾಹಿತಿ ಇದೆ.




