ಟೀಮ್ ಇಂಡಿಯಾದ ಕೋಚ್ ಹುದ್ದೆಯಲ್ಲಿ ರಾಹುಲ್ ದ್ರಾವಿಡ್ ಅವರನ್ನೇ ಮುಂದುವರಿಸುವ ನಿರ್ಧಾರಕ್ಕೆ ಬಂದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ), ಇದೀಗ ಟಿ20ಯಲ್ಲೂ ತಂಡದ ನಾಯಕತ್ವವಹಿಸುವಂತೆ ರೋಹಿತ್ ಶರ್ಮಾ ಅವರ ಮನವೊಲಿಸುವ ಪ್ರಯತ್ನಕ್ಕೆ ಬಿಸಿಸಿಐ ಮುಂದಾಗಿದೆ.
ಭಾರತದಲ್ಲಿ ಇತ್ತೀಚೆಗೆ ನಡೆದ ಏಕದಿನ ವಿಶ್ವಕಪ್ ಬಳಿಕ ಭಾರತ ತಂಡದಲ್ಲಿ ಸಾಕಷ್ಟು ಬದಲಾವಣೆಯಾಗುವ ನಿರೀಕ್ಷೆ ಹೆಚ್ಚಾಗಿತ್ತು. ವಿಶ್ವಕಪ್ ಬಳಿಕ ತಂಡಕ್ಕೆ ಹೊಸ ಕೋಚ್ ನೇಮಕವಾಗುವ ನಿಟ್ಟಿನಲ್ಲಿ ಸಾಕಷ್ಟು ಚರ್ಚೆಗಳು ಸಹ ನಡೆದಿತ್ತು. ಆದರೆ ಈ ಎಲ್ಲಾ ಚರ್ಚೆಗಳಿಗೆ ಅಂತ್ಯವಾಡಿರುವ ಬಿಸಿಸಿಐ, ಕೋಚ್ ಹುದ್ದೆಯಲ್ಲಿ ರಾಹುಲ್ ದ್ರಾವಿಡ್ ಅವರನ್ನೇ ಮುಂದುವರಿಸುವ ನಿರ್ಧಾರಕ್ಕೆ ಬಂದಿದೆ. ಇದರ ಬೆನ್ನಲ್ಲೇ ಇದೀಗ ರೋಹಿತ್ ಶರ್ಮಾ ಅವರನ್ನು ಟಿ20ಯಲ್ಲಿ ಭಾರತ ತಂಡವನ್ನು ಮುನ್ನಡೆಸಲು ಬಿಸಿಸಿಐ ಮನವೊಲಿಸುವ ಪ್ರಯತ್ನಕ್ಕೆ ಮುಂದಾಗಿದೆ.

ಭಾರತ ತಂಡದ ಕಾಯಂ ನಾಯಕನಾಗಿರುವ ರೋಹಿತ್, ಪ್ರಸ್ತುತ ಟೆಸ್ಟ್ ಹಾಗೂ ಏಕದಿನ ತಂಡಗಳನ್ನ ಮುನ್ನಡೆಸುತ್ತಿದ್ದು, ಟಿ20 ಮಾದರಿಯಲ್ಲಿ ತಂಡದ ನಾಯಕತ್ವದಿಂದ ದೂರ ಉಳಿದಿದ್ದಾರೆ. ಹೀಗಾಗಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಸೇರಿದಂತೆ ಹಲವು ಆಟಗಾರರು ಟಿ20ಯಲ್ಲಿ ಭಾರತ ತಂಡವನ್ನ ಮುನ್ನಡೆಸುವ ಜವಾಬ್ದಾರಿ ನಿರ್ವಹಿಸುವಂತಾಗಿದೆ. ಹೀಗೆ ಟಿ20ಯಲ್ಲಿ ಪ್ರತಿಬಾರಿಯೂ ತಾತ್ಕಾಲಿಕ ನಾಯಕತ್ವದಲ್ಲಿ ತಂಡವನ್ನ ಮುನ್ನಡೆಸುವ ಬದಲು ಹಾಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ತಂಡದ ನಾಯಕತ್ವವಹಿಸಿರುವ ರೋಹಿತ್ ಅವರೇ ಟಿ20ಯಲ್ಲೂ ತಂಡವನ್ನ ಮುನ್ನಡೆಸಲಿ ಎಂಬುದು ಬಿಸಿಸಿಐ ಲೆಕ್ಕಾಚಾರವಾಗಿದೆ.
ಮತ್ತೊಂದೆಡೆ 2024ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಸದ್ದಿಲ್ಲದೆ ತಯಾರಿ ಆರಂಭಿಸಿರುವ ಟೀಂ ಇಂಡಿಯಾ, ರೋಹಿತ್ ಶರ್ಮಾ ಅವರ ನಾಯಕತ್ವದಲ್ಲೇ ಕಣಕ್ಕಿಳಿಯಲು ನಿರ್ಧರಿಸಿದಂತಿದೆ. ಹೀಗಾಗಿ ಡಿಸೆಂಬರ್ ತಿಂಗಳಲ್ಲಿ ನಡೆಯುವ ಸೌತ್ ಆಫ್ರಿಕಾ ಪ್ರವಾಸದ ವೇಳೆ ನಡೆಯಲಿರುವ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲೇ ತಂಡವನ್ನ ಕಣಕ್ಕಿಳಿಸುವ ನಿರೀಕ್ಷೆ ಹೊಂದಿದ್ದು, ಇದಕ್ಕಾಗಿ ರೋಹಿತ್ ಅವರ ಮನವೊಲಿಸುವ ಪ್ರಯತ್ನದಲ್ಲಿ ಬಿಸಿಸಿಐ ತೊಡಗಿದೆ. ಇತ್ತೀಚೆಗೆ ನಡೆದ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ, ಭಾರತ ತಂಡವನ್ನ ಮುನ್ನಡೆಸಿದ ರೀತಿಯಿಂದಾಗಿ ಬಿಸಿಸಿಐ ಈ ಮಹತ್ವದ ನಿರ್ಧಾರವನ್ನ ಕೈಗೊಂಡಿದೆ ಎನ್ನಲಾಗುತ್ತಿದೆ.
ನಿರೀಕ್ಷೆಯಂತೆ ಬಿಸಿಸಿಐ ರೋಹಿತ್ ಶರ್ಮಾ ಅವರ ಮನವೊಲಿಸುವಲ್ಲಿ ಯಶಸ್ವಿಯಾದಲ್ಲಿ, ಮುಂಬರುವ ಸೌತ್ ಆಫ್ರಿಕಾ ವಿರುದ್ಧ ಸರಣಿಯ ಜೊತೆಗೆ 2024ರಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಟೀಂ ಇಂಡಿಯಾ ನಾಯಕನಾಗಿ ಮುಂದುವರಿಯುವುದು ಬಹುತೇಕ ಖಚಿತ ಆಗಲಿದೆ. ಒಂದೊಮ್ಮೆ ರೋಹಿತ್ ಶರ್ಮಾ ಈ ನಿರ್ಧಾರದಿಂದ ಮತ್ತೆ ಹಿಂದೆಸರಿದರೆ, ಮಹತ್ವದ ಟೂರ್ನಿಯಲ್ಲಿ ಭಾರತವನ್ನ ಮುನ್ನಡೆಸುವ ಜವಾಬ್ದಾರಿ ಯಾರಿಗೆ ಲಭಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.




