ಬೆಂಗಳೂರು: ‘ಕಾಂತಾರ’ ಚಿತ್ರದ ಬಳಿಕ ನಟ ರಿಷಬ್ ಶೆಟ್ಟಿ ಕಾಂತಾರ-1 ಸಿನಿಮಾಗೆ ಸಿದ್ಧತೆ ನಡೆಸಿದ್ದಾರೆ. ಕಾಂತಾರ ಸಿನಿಮಾ ಜನಮನ್ನಣೆ ಪಡೆದಿತ್ತು. ಇದರ ಬೆನ್ನಲ್ಲೇ ಅದರ ಮತ್ತೊಂದು ಭಾಗ ವೀಕ್ಷಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ, ನಟ ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್ 1 ಚಿತ್ರೀಕರಣಕ್ಕೆ ಹೊಸ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ.
‘ಕಾಂತಾರ’ದಲ್ಲಿ ಬರೋ ಪಂಜುರ್ಲಿ, ಗುಳಿಗ ದೈವದ ಮೂಲ ಮಂಗಳೂರು. ಈ ಜಾಗದಲ್ಲಿ ಕಾಂತಾರ ಚಾಪ್ಟರ್ 1 ಚಿತ್ರೀಕರಣ ಮಾಡೋಕೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ನಟ ರಿಷಬ್ ಕಾಂತಾರ ಚಾಪ್ಟರ್ 1 ಶೂಟಿಂಗ್ ಮುಂದಿನ ವರ್ಷ ಜನವರಿಯಿಂದ ಪ್ರಾರಂಭಿಸುವ ಬಗ್ಗೆ ಚಿತ್ರತಂಡದ ಮೂಲಗಳು ತಿಳಿಸಿವೆ.
ಈ ಶೂಟಿಂಗ್ ಲೊಕೇಷನ್ ಹುಡುಕಾಟವೂ ನಡೆದಿದೆ. ಕಾಂತಾರ ಸಿನಿಮಾದ ಯಶಸ್ಸು ರಿಷಬ್ ಶೆಟ್ಟಿಗೆ ಎಲ್ಲಾ ಭಾಷೆಯ ಜನರು ಗುರುತಿಸುವಂತೆ ಮಾಡಿತ್ತು. ಅಭಿಮಾನಿಗಳ ಅಭಿಮಾನವೇ ಈಗ ಚಿತ್ರೀಕರಣಕ್ಕೆ ತೊಂದರೆ ಎಂದು ಹೇಳಲಾಗುತ್ತಿದೆ.
ನಟ ರಿಷಬ್ ಶೆಟ್ಟಿ ಚಿತ್ರೀಕರಣ ಲೊಕೇಷನ್ ಹುಡುಕಾಟಕ್ಕೆ ಹೋದ ಕಡೆಯಲೆಲ್ಲ ಅಭಿಮಾನಿಗಳು ಮುತ್ತಿಕೊಳ್ತಿದ್ದಾರೆ. ಇದು ಚಿತ್ರೀಕರಣ ಸಮಯದಲ್ಲಿ ತುಂಬಾ ತೊಂದರೆ ಆಗುತ್ತದೆ ಎಂದು ರಿಷಬ್ ಹೇಳಿದ್ದಾರೆ. ಹೀಗಾಗಿ ಈಗ ಕಾಂತಾರ 1 ಶೂಟಿಂಗ್ಗೆ ಹೊಸ ಮಾರ್ಗ ಹುಡುಕಿದ್ದು, ಉಡುಪಿ ಟು ಶ್ರೀಲಂಕಾ ರಹಸ್ಯ ಪ್ರಯಾಣವಾಗಿದೆ.
ಕಾಂತಾರ ಸಿನಿಮಾ ಮುಹೂರ್ತ ಇದೇ ನವೆಂಬರ್ 27ಕ್ಕೆ ಉಡುಪಿಯ ಆನೆಗುಡ್ಡೆಯ ವಿಘ್ನೇಶ್ವರ ಸನ್ನಿಧಿಯಲ್ಲಿ ನಡೆದಿದೆ. ‘ಕಾಂತಾರ’ ಚಿತ್ರೀಕರಣಕ್ಕೆ ಶೆಟ್ಟರ ತಂಡ ಶ್ರೀಲಂಕಾಗೆ ತೆರಳಲು ಸಿದ್ಧತೆ ನಡೆಸಿದೆ. ದೈವದ ನೆಲೆ ಕರಾವಳಿ ಭಾಗದಲ್ಲಿ ಶೂಟಿಂಗ್ ಮಾಡಿದರೆ ಆ ಜಾಗಕ್ಕೆ ಜನ ಹುಡುಕಿಕೊಂಡು ಬರುತ್ತಾರೆ. ಇದರಿಂದ ಚಿತ್ರೀಕರಣದ ದೃಶ್ಯಗಳು ಲೀಕ್ ಆಗುತ್ತದೆ ಎಂಬ ಆಲೋಚನೆಯಲ್ಲಿರುವ ರಿಷಬ್, ಕಾಂತಾರದ ಪ್ರಮುಖ ಭಾಗವನ್ನು ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡೋಕೆ ಯೋಜನೆ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.




