ಹಾಸನ : ಮುಂಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್ ಸಕಲ ಸಿದ್ದತೆ ಈಗಲೇ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರೇ ಸ್ಪರ್ಧೆ ಮಾಡಲಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಘೋಷಿಸಿದ್ದಾರೆ.
ಇದರಿಂದ ಕಳೆದ ಹಲವಾರು ದಿನಗಳಿಂದ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಕೇಳಿಬರುತ್ತಿದ್ದ ಊಹಾಪೋಹಗಳಿಗೆ ತೆರೆಬಿದ್ದಿದೆ. ಇದರಿಂದ ಚುನಾವಣೆಗೆ ಇನ್ನೂ ಆರು ತಿಂಗಳು ಇರುವಂತೆಯೇ ಜೆಡಿಎಸ್ ಅಭ್ಯರ್ಥಿ ಘೋಷಿಸಿದಂತಾಗಿದೆ.
ಹೊಳೆನರಸೀಪುರದ ಕಟ್ಟೆಬೆಳಗುಲಿ ಶ್ರೀರಾಮದೇವರ ಕಟ್ಟೆಯಲ್ಲಿ ನಡೆದ ಜೆಡಿಎಸ್ ನ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ದೊಡ್ಡ ವ್ಯಕ್ತಿಯಾಗಿ ಬೆಳೆದಿರುವ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಜೆಡಿಎಸ್ ಸೇರಿ ಒಟ್ಟಾಗಿ ಕೆಲಸ ಮಾಡೋಣ ಎಂದು ಕರೆನೀಡಿದರು.
ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಟ್ಟಾಗಿ ಸೇರಿ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಲು ಈಗಾಗಲೇ ತೀರ್ಮಾನಿಸಲಾಗಿದೆ. ಆದ್ದರಿಂದ ಅಸೂಯೆ, ಟೀಕೆಗಳನ್ನು ಬಿಟ್ಟು ಹಾಸನ ಸಂಸದರ ಜಯಕ್ಕಾಗಿ ಶ್ರಮಿಸೋಣ ಎಂದು ಕರೆ ನೀಡಿದರು.
ಲೋಕಸಭಾ ಚುನಾವಣೆಗೆ ತಾವು ಸ್ಪರ್ಧಿಸುವ ಸಂಬಂಧ ಮಾತನಾಡಿದ ಅವರು, ಸದ್ಯಕ್ಕೆ ರಾಜ್ಯ ಸಭಾ ಸದಸ್ಯನಾಗಿದ್ದು, ಇನ್ನೂ ಎರಡು ವರ್ಷ ಅವಧಿ ಇದೆ ಎಂದಷ್ಟೇ ಹೇಳಿದರು. ಆದರೆ, ಯಾವುದೇ ಕಾರಣಕ್ಕೂ ತಮ್ಮ ಸ್ಪರ್ಧೆಯ ಕುರಿತ ಗುಟ್ಟು ಬಿಟ್ಟುಕೊಟ್ಟಿಲ್ಲ.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸೀಟು ಹಂಚಿಕೆ ಕುರಿತು ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಸೇರಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ ಅವರು, ಪಂಚ ರಾಜ್ಯ ಚುನಾವಣೆ ಮುಂದಿನ ಲೋಕಸಭೆ ಮೇಲೆ ಯಾವುದೇ ರೀತಿ ಪರಿಣಾಮ ಬೀರಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಅಭಿಪ್ರಾಯಪಟ್ಟರು.




