ಬೆಂಗಳೂರು: ಸೌತ್ ಆಫ್ರಿಕಾ ವಿರುದ್ಧ ನಡೆಯಲಿರುವ ಟೆಸ್ಟ್, ಏಕದಿನ ಹಾಗೂ ಟಿ20 ಸರಣಿಗಳಿಗೆ ತಂಡವನ್ನ ಪ್ರಕಟಿಸಿರುವ ಟೀಂ ಇಂಡಿಯಾ, ಮೂರು ಮಾದರಿಯ ಪಂದ್ಯಗಳಿಗೂ ಪ್ರತ್ಯೇಕ ಆಟಗಾರರನ್ನೊಳಗೊಂಡ ತಂಡವನ್ನ ಪ್ರಕಟಿಸುವ ಮೂಲಕ ಹಿರಿಯ ಆಟಗಾರರ ಜೊತೆಗೆ ಯುವ ಆಟಗಾರರಿಗೆ ಮಣೆಹಾಕಿದೆ.
ಹರಿಣಗಳ ವಿರುದ್ಧದ ಸರಣಿಗೆ ಮೂರು ಮಾದರಿಯಲ್ಲೂ ಮೂವರು ಪ್ರತ್ಯೇಕ ನಾಯಕರನ್ನ ಆಯ್ಕೆ ಮಾಡಿರುವ ಬಿಸಿಸಿಐ, ಹೊಸ ತಂತ್ರವನ್ನ ರೂಪಿಸಿಕೊಂಡಿದೆ. ಟೆಸ್ಟ್ ತಂಡವನ್ನ ರೋಹಿತ್ ಶರ್ಮಾ ಮುನ್ನಡೆಸಿದರೆ, ಟಿ20ಯಲ್ಲಿ ಸೂರ್ಯಕುಮಾರ್ ಯಾದವ್ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿದ್ದಾರೆ. ಇನ್ನೂ ಏಕದಿನ ತಂಡದ ನಾಯಕರನ್ನಾಗಿ ಕೆಎಲ್ ರಾಹುಲ್ ಅವರನ್ನ ಆಯ್ಕೆ ಮಾಡಲಾಗಿದೆ.

ಈ ನಡುವೆ ಟೀಂ ಇಂಡಿಯಾದ ಅನುಭವಿ ಆಟಗಾರರಾದ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆದಿದ್ದಾರೆ. ಚೇತೇಶ್ವರ್ ಪುಜಾರ ಹಾಗೂ ಅಜಿಂಕ್ಯಾ ರಹಾನೆ ಅವರನ್ನ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲಾಗಿದ್ದು, ಆ ಮೂಲಕ ಭವಿಷ್ಯದ ತಂಡವನ್ನ ರೂಪಿಸುವುದು ಬಿಸಿಸಿಐ ಲೆಕ್ಕಾಚಾರವಾಗಿದೆ.
ಋತುರಾಜ್ ಗಾಯಕ್ವಾಡ್ ಅವರನ್ನ ಮೂರು ಮಾದರಿ ಪಂದ್ಯಗಳಿಗೂ ಆಯ್ಕೆ ಮಾಡಿರುವ ಬಿಸಿಸಿಐ, ಟಿ20ಯಲ್ಲಿ ರಿಂಕು ಸಿಂಗ್, ಸಾಯಿ ಸುದರ್ಶನ್ ಅವರನ್ನ ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇವರ ಜೊತೆಗೆ ಪ್ರಸ್ತುತ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಅವಕಾಶ ಕಳೆದುಕೊಂಡಿದ್ದ ಸಂಜೂ ಸ್ಯಾಮ್ಸನ್ ಮತ್ತು ಯುಜ್ವೇಂದ್ರ ಚಹಲ್ ಅವರನ್ನ ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದೆ.




