ಬೆಂಗಳೂರು: ಮಾಜಿ ಸಚಿವ, ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಅವರ ಭಾವ ಮಹದೇವಯ್ಯ ನಿನ್ನೆ ರಾತ್ರಿಯಿಂದ ಕಾಣೆಯಾಗಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚೆಕ್ಕೆರೆ ಗ್ರಾಮದ ತೋಟದ ಮನೆಯಲ್ಲಿ ತಂಗಿದ್ದ ಯೋಗೇಶ್ವರ್ ರ ಭಾವ ಮಹದೇವಯ್ಯ ಅವರು ಏಕಾಏಕಿ ನಾಪತ್ತೆಯಾಗಿದ್ದು, ಹಲವು ಅನುಮಾನ ಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ವಾಸವಿರುವ ಉದ್ಯಮಿ ಹಾಗೂ ಮೆಗಾಸಿಟಿ ನಿರ್ದೇಶಕರಾಗಿರುವ ಮಹದೇವಯ್ಯ ಅವರು ಆಗಾಗ ತೋಟದ ಮನೆಗೆ ಬಂದು ತಂಗುತ್ತಿದ್ದರು. ಆದ್ರೆ, ನಿನ್ನೆ ರಾತ್ರಿಯಿಂದ ಕಾಣೆಯಾಗಿದ್ದಾರೆಂದು ಕುಟುಂಬದವ್ರು ಠಾಣೆ ಮೆಟ್ಟಿಲೇರಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ತೋಟದ ಮನೆಗೆ ಭೇಟಿ ಕೊಟ್ಟ ಚನ್ನಪಟ್ಟಣ ಗ್ರಾಮೀಣ ಪೊಲೀಸರ, ಪರಿಶೀಲನೆ ನಡೆಸಿದರು.
ಈ ವೇಳೆ ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮಹದೇವಯ್ಯ ತಂಗಿದ್ದ ರೂಂ ನಲ್ಲಿರುವ ವಸ್ತುಗಳು ಚಲ್ಲಾಪಿಲ್ಲಿಯಾಗಿದೆ. ಮನೆ ಬೀಗ ಮುರಿದಿದ್ದು, ಮಹದೇವಯ್ಯ ರ ಫೋನ್ ಸ್ವಿಚ್ ಆಫ್ ಆಗಿದೆ. ಮನೆ ಮುಂದೆ ನಿಲ್ಲಿಸಿದ್ದ ಕಾರ್ ಕೂಡ ನಾಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಈ ಕುರಿತು ಮಾತನಾಡಿದ ಯೋಗೇಶ್ವರ್ ಸಹೋದರ ಸಿ.ಪಿ.ರಾಜೇಶ್, ತೋಟದ ಮನೆಗೆ ಬಂದು ನೋಡಿದಾಗ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿ ಆಗಿತ್ತು. ಬೇರೆ ಬೇರೆ ಕಾರು ಓಡಾಡಿರುವ ಸಾಧ್ಯತೆ ಇದೆ. ಹೀಗಾಗಿ ಮಹದೇವಯ್ಯರನ್ನು ಅಪಹರಣ ಮಾಡಿರುವ ಅನುಮಾನ ಇದೆ. ಅದಕ್ಕೆ ನಾವು ಪೊಲೀಸರಿಗೆ ಇರುವ ವಿಚಾರ ಹೇಳಿದ್ದೇವೆ ಎಂದು ತಿಳಿಸಿದರು.




