ವಿಜಯಪುರ: ವಿಜಯಪುರ ನಗದ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿನ ರಾಜ್ ಗುರು ಫುಡ್ ಗೋದಾಮಿನಲ್ಲಿನ ಮೆಕ್ಕೆಜೋಳ ಸಂಸ್ಕರಣ ಘಟಕದಲ್ಲಿ ನಡೆದ ದುರಂತದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಇಂದೂ ಕೂಡ ಮುಂದುವರೆದಿದೆ. ಇದುವರೆಗೂ ಐವರು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿದ್ದು, ಅನೇಕರನ್ನು ರಕ್ಷಿಸಲಾಗಿದೆ.
ಮೆಕ್ಕೆಜೋಳದ ರಾಶಿಯಲ್ಲಿ ಇನ್ನೂ ಕೆಲವರು ಸಿಲುಕಿದ್ದರಿಂದ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಗಂಟೆಗಳು ಉರುಳುತ್ತಿದ್ದಂತೆಯೇ ಮೆಕ್ಕೆ ಜೋಳದ ರಾಶಿಯಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರು ಬದುಕುಳಿದಿರುವ ಸಾಧ್ಯತೆಗಳು ಕ್ಷೀಣಿಸುತ್ತಿವೆ.

ಬಿಹಾರ ಮೂಲದ ರಾಜೇಶ್(25), ರಾಮ್ಜಿ ಮುಖಿಯಾ(29), ಲುಕೋ ಜಾಧವ್(45), ಶಂಭು ಮುಖಿಯಾ(26) ಹಾಗೂ ರಾಮ್ ಬಲಕ್ (52) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಮೆಕ್ಕೆ ಜೋಳ ತುಂಬಿದ ಬೃಹತ್ ಟ್ಯಾಂಕ್ ಗಳು ಓವರ್ ಲೋಡ್ ನಿಂದ ಭಾರ ತಾಳಲಾರದೇ ಸ್ಫೋಟಗೊಂಡು ಈ ಅವಘಡ ಸಂಭವಿಸಿದೆ ಎಂದು ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕು ಜೆಸಿಬಿಗಳು ಮೆಕ್ಕೆಜೋಳವನ್ನು ಬಗೆದು ಟಿಪ್ಪರ್ ಲಾರಿಗಳಿಗೆ ತುಂಬಿ ಹೊರಹಾಕುವ ಕಾರ್ಯದಲ್ಲಿ ನಿರಂತರವಾಗಿ ನಡೆಸುತ್ತಿವೆ. ಇನ್ನೊಂದೆಡೆ ಸಂಸ್ಕರಣಾ ಘಟಕದ ಭಾಗಗಳನ್ನು ಕತ್ತರಿಸಿ ತೆಗೆಯಲಾಗುತ್ತಿದೆ. ನೂರಾರು ಕಾರ್ಮಿಕರು ತಮ್ಮ ಸಂಬಂಧಿಗಳಿಗಾಗಿ ಆತಂಕದಿಂದ ಕಾಯುತ್ತಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರು ಘಟನಾ ಸ್ಥಳಕ್ಕೆ ತೆರಳಿ, ಕಾರ್ಮಿಕರಿಗೆ ಸಾಂತ್ವಾನ ಹೇಳಿದರು. ಹಾಗೆಯೇ ಸರ್ಕಾರ ಮತ್ತು ಮಾಲೀಕರಿಂದ ಸೂಕ್ತ ರೀತಿಯ ಪರಿಹಾರ ಒದಗಿಸುವ ಭರವಸೆ ನೀಡಿದ ಅವರು, ಮೃತದೇಹಗಳನ್ನು ಬಿಹಾರಕ್ಕೆ ಕೊಂಂಡೊಯ್ಯುಲು ಅಗತ್ಯ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ ಗುರು ಫುಡ್ ಘಟಕದಲ್ಲಿ ಕಳೆದ ವರ್ಷನೂ ಇಂತಹದ್ದೇ ಸಣ್ಣ ಘಟನೆ ನಡೆದಿದ್ದು, ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಪ್ರಸ್ತುತ ಮಾಲೀಕ ಕಿಶೋರ್ ಜೈನ್ ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ 100ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇದರಲ್ಲಿ ಅನೇಕರು ಸಂಸ್ಕರಣ ಘಟಕ ಸ್ಪೋಟಗೊಂಡಾಗ ಓಡಿ ಜೀವ ಉಳಿಸಿಕೊಂಡಿದ್ದಾರೆ. ಸುಮಾರು 15 ರಿಂದ 20 ಕಾರ್ಮಿಕರು ಸಿಲುಕಿರಬಹುದು ಎಂದು ಶಂಕಿಸಲಾಗಿದೆ.