DISCUSS NORTH KARNATAKA ISSUES: ಇಲ್ಲಿ ಸದನ ಕರೆದಿರುವುದು ಉತ್ತರ ಕರ್ನಾಟಕದ ಚರ್ಚೆಗೆ: ಬೆಂಗಳೂರು ಸಮಸ್ಯೆ ಮಾತ್ರ ಮಾತನಾಡಿದ್ರೆ ಹೇಗೆ: ಶಾಸಕ ಲಕ್ಷ್ಮಣ ಸವದಿ ಪ್ರಶ್ನೆ

ಬೆಳಗಾವಿ: ಕಬ್ಬು ಬೆಳೆ ಸಮಸ್ಯೆ ಬಗ್ಗೆ ಮೊದಲು ಚರ್ಚೆ ಮಾಡಿ, ಬೆಂಗಳೂರು ಸಮಸ್ಯೆ ಬಗ್ಗೆ ಅಲ್ಲ ಚರ್ಚೆ ಮಾಡೋದು, ಉ.ಕ ಭಾಗದ ಜ್ವಲಂತ ಸಮಸ್ಯೆ ಬಗ್ಗೆ ಮೊದಲು ಚರ್ಚೆ ಮಾಡಿ ಎಂದು ಶಾಸಕ ಲಕ್ಷ್ಮಣ ಸವದಿ ಸದನದಲ್ಲಿ ಆಗ್ರಹ ಮಾಡಿದರು.
ಬೆಳಗಾವಿಯಲ್ಲಿ ಅಧಿವೇಶನ ಕರೆಯಲಾಗಿದೆ, ಆದ್ರೆ ಬೆಂಗಳೂರು ಸಮಸ್ಯೆ ಬಗ್ಗೆ ಮಾತನಾಡಿದ್ರೆ ಹೇಗೆ? ಇಲ್ಲಿ ಅಧಿವೇಶನ ಕರೆದಿದ್ದು ಈ ಭಾಗದ ಚರ್ಚೆಗೆ, ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ರೈತರಿಗೆ ಅನ್ಯಾಯ ಆಗುತ್ತಿದೆ, ಕಬ್ಬು ಬೆಳೆಗೆ ಬೆಲೆ ಸಿಗ್ತಾ ಇಲ್ಲ, ತೂಕದಲ್ಲಿ ವ್ಯತ್ಯಾಸ ಆಗುತ್ತಿದೆ, ಅದು ಬಿಟ್ಟು ಕೊಬ್ಬರಿ ಬೆಲೆ ಚರ್ಚೆಗೆ ಅವಕಾಶ ಕೊಡುತ್ತಿದ್ದೀರ ಎಂದು ಪ್ರಶ್ನಿಸಿದರು.
ಈ ವೇಳೆ ಸ್ಪೀಕರ್ ಯು ಟಿ ಖಾದರ್ ಮಧ್ಯ ಪ್ರವೇಶ ಮಾಡಿ, ರಾಜ್ಯದ ಸಮಸ್ಯೆ, ಜೊತೆಗೆ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆಯಾಗಬೇಕು, ಎಲ್ಲರ ಸಹಕಾರ ಇದ್ರೆ ಬೇಗ ಬೇಗ ಚರ್ಚೆ ಮಾಡೋಣ, ಈಗಾಗಲೇ ಬರಗಾಲದ ಚರ್ಚೆ ಆರಂಭವಾಗಿದೆ, ಅದು ಮುಗಿದ ಬಳಿಕ ಉತ್ತರ ಕರ್ನಾಟಕ ಚರ್ಚೆ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಈ ವೇಳೆ ಎದ್ದು ನಿಂತ ಶಾಸಕ ಕೋನರೆಡ್ಡಿ, ಮಹದಾಯಿ, ಕೃಷ್ಣ ಚರ್ಚೆಗೆ ನೋಟಿಸ್ ಕೊಟ್ಟಿದ್ದೇವೆ, ಹತ್ತು ಶಾಸಕರು ಸಹಿ ಮಾಡಿ ಕೊಟ್ರು ನೀವು ಪರಿಗಣಿಸಿಲ್ಲ ಎಂದರು. ಒಮ್ಮೆಲೆ ಎಲ್ಲರನ್ನೂ ಮೆಚ್ಚಿಸಲು ದೇವರಾಗಬೇಕು, ಮನುಷ್ಯರಿಂದ ಸಾಧ್ಯವಿಲ್ಲ, ಖಂಡಿತ ಅವಕಾಶ ಕೊಡುತ್ತೇನೆ ಎಂದು ಸ್ಪೀಕರ್ ಭರವಸೆ ನೀಡಿದರು.

More News