ಬೆಳಗಾವಿ : ಸರ್ಕಾರಿ ಶಾಲೆಯ ಎಂಟನೇ ತರಗತಿ ಮಕ್ಕಳಿಗೆ ಸೈಕಲ್ ವಿತರಣೆ ಕಾರ್ಯಕ್ರಮ ಬಿಜೆಪಿ ಕಾಲದಲ್ಲೇ ಸ್ಥಗಿತ ಆಗಿತ್ತು, ನಿಮ್ಮವರೇ ಆರಂಭಿಸಿ ನಿಮ್ಮ ಕಾಲದಲ್ಲೇ ಸ್ಥಗಿತ ಆಯ್ತು, ಹೀಗಾಗಬಾರದಿತ್ತು ಎಂದು ಸಚಿವ ಮಧು ಬಂಗಾರಪ್ಪ ಅವರು ಪ್ರತಿಪಕ್ಷದ ನಾಯಕ ಆರ್ ಅಶೋಕ್ ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಶಾಸಕ ಪ್ರದೀಪ್ ಈಶ್ವರ್, ಸರ್ಕಾರಿ ಶಾಲೆ ಎಂಟನೇ ತರಗತಿ ಮಕ್ಕಳಿಗೆ ಮತ್ತೆ ಸೈಕಲ್ ವಿತರಿಸಲು ಸರ್ಕಾರವನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಉತ್ತರ ನೀಡಿದ ಸಚಿವ ಮಧು ಬಂಗಾರಪ್ಪ, ಮುಂದಿನ ಬಜೆಟ್ ನಲ್ಲಿ ಸೈಕಲ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು, ಸಿಎಂ, ಆರ್ಥಿಕ ಇಲಾಖೆ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಸದನಕ್ಕೆ ಭರವಸೆ ನೀಡಿದರು.

ಈವೇಳೆ ಪ್ರದೀಪ್ ಈಶ್ವರ್ ಎರಡು ಜತೆ ಶೂ, ಸಾಕ್ಸ್ ಬದಲು ನಾಲ್ಕು ಜೊತೆ ಶೂ, ಸಾಕ್ಸ್ ಕೊಡಲು ಮನವಿ ಮಾಡಿದರು. ಇದರ ಬಗ್ಗೆಯೂ ಪರಿಶೀಲಿಸೋದಾಗಿ ಸಚಿವ ಮಧು ಬಂಗಾರಪ್ಪ ಉತ್ತರ ನೀಡಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಪ್ರತಿ ಪಕ್ಷದ ನಾಯಕ ಅಶೋಕ್, ಇಡೀ ರಾಜ್ಯದಲ್ಲಿ ಸೈಕಲ್ ವಿತರಣೆ ಪುನಾರಂಭಿಸಿ, ಮಾಜಿ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಅವರು ತಂದಿರುವ ಯೋಜನೆ ಇದಾಗಿದೆ. ದೂರದಿಂದ ಬರುವ ಮಕ್ಕಳಿಗೆ ಸಹಾಯ ಆಗುತ್ತೆ ಎಂದರು.
ಇದಕ್ಕೆ ಸಚಿವ ಮಧು ಬಂಗಾರಪ್ಪ ಖಾರವಾಗಿ ಪ್ರತಿಕ್ರಿಯೆಸಿ, ಯಡಿಯೂರಪ್ಪ ಅವರ ಕಾಲದಲ್ಲಿ ಪ್ರಾರಂಭವಾಗಿ ಅವರ ಕಾಲದಲ್ಲೇ ಅದು ನಿಂತುಹೋಗಿದೆ. ಈಗ ನಮ್ಮ ಸರ್ಕಾರ ಸೈಕಲ್ ವಿತರಣೆಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಿದೆ ಎಂದರು.




