ಬೆಳಗಾವಿ/ಸುವರ್ಣಸೌಧ: ವಿರೋಧ ಪಕ್ಷದ ನಾಯಕ ಹಾಗು ಬಿಜೆಪಿಯ ಶಾಸಕರ ನಡುವಿನ ಅಸಮಾಧಾನ ಸದನದಲ್ಲೂ ಮಾರ್ಧನಿಸಿದೆ.
ತಮ್ಮದೇ ಪಕ್ಷದ ನಾಯಕನ ನಿರ್ಧಾರಕ್ಕೆ ಬಿಜೆಪಿ ಪಕ್ಷದಲ್ಲಿನ ಕೆಲ ಶಾಸಕರು ಕಿಮ್ಮತ್ತು ಬೆಲೆ ನೀಡದಿರುವ ಪ್ರಸಂಗ ಗುರುವಾರ ಸದನದಲ್ಲಿ ಜರುಗಿತು.

ವಿರೋಧ ಪಕ್ಷದ ನಾಯಕನಾಗಿ ಆರ್.ಅಶೋಕ್ ಆಯ್ಕೆಗೆ ಈ ಹಿಂದೆ ಬಿಜೆಪಿ ಪಕ್ಷದಲ್ಲಿ ಕೆಲ ಶಾಸಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಬಿಜೆಪಿ ಹಿರಿಯ ನಾಯಕರು ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದಿದ್ದರು. ಆದರೆ, ಬಿಜೆಪಿಯಲ್ಲಿನ ಒಳಬೇಗುದಿ ಶಮನವಾಗಿಲ್ಲದಿರುವುದು ಇದೀಗ ಸದನದಲ್ಲೂ ಬಹಿರಂಗವಾಗಿದೆ. ಇದರಿಂದ ಬಿಜೆಪಿ ನಾಯಕರು ಸದನದಲ್ಲೇ ಆಡಳಿತ ಪಕ್ಷದವರ ಮುಂದೆಯೇ ಮುಖಭಂಗ ಅನುಭವಿಸಿದರು.

ವಿಧಾನಸಭೆಯಲ್ಲಿ ಆರಗ ಜ್ಞಾನೇಂದ್ರ ಅವರು, ಬೆಳಗಾವಿ ಪೃಥ್ವಿ ಸಿಂಗ್ ಹಾಗು ಅಭಿಜಿತ್ ಜವಳ್ ಕರ್ ಪ್ರಕರಣ ಸಂಬಂಧ ಚರ್ಚೆ ಪ್ರಾರಂಭಿಸಿದರು. ಈ ವೇಳೆ ಗೃಹ ಸಚಿವ ಡಾ ಜಿ.ಪರಮೇಶ್ವರ್, ಪೃಥ್ವಿ ಸಿಂಗ್ ಪ್ರಕರಣದಲ್ಲಿ, ಚೆನ್ನರಾಜ್ ಹಟ್ಟಿಹೊಳಿ , ಸದ್ದಾಂ ಹಾಗೂ ಸುಜಿತಾ ಜಾದವ್ ಅವರು ಬೈದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಹರಿತವಾದ ಆಯುಧದಲ್ಲಿ ಹಲ್ಲೆ ಮಾಡಿದ ಬಗ್ಗೆ ದೂರು ದಾಖಲಾಗಿತ್ತು. ನಾವು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಡಿವೈಎಸ್ ಪಿ ಹಂತದ ಅಧಿಕಾರಿಯಿಂದ ತನಿಖೆ ನಡೆಸಲಾಗುವುದು. ಈ ತನಿಖೆಯ ಬಳಿಕ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.

ಗೃಹ ಸಚಿವರ ಉತ್ತರದ ಬಳಿಕ ಬಿ ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿ, ಪೃಥ್ವಿ ಸಿಂಗ್ ದೂರಿನಲ್ಲಿ ಚೆನ್ನರಾಜ್ ಹಟ್ಟಿಹೊಳಿ ಫೋನ್ ಕಸಿದುಕೊಂಡಿದ್ದಾರೆ. ಹುಡುಗರಿಗೆ ಹೊಡೆಯಲು ಹೇಳಿದ್ದಾರೆ. ಪೊಲೀಸ್ ಎಫ್ ಐ ಆರ್ ನಲ್ಲಿ ಕಳ್ಳತನ ಪ್ರಕರಣ ಬುಕ್ ಮಾಡಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆ ಎಂದು ಉಲ್ಲೇಖ ಮಾಡಿಲ್ಲ ಸೆಕ್ಷನ್ 397 ಹಾಗು ಸೆಕ್ಷನ್ 398, ಕೊಲೆ ಯತ್ನ ಪ್ರರಕರಣ ದಾಖಲಾಗಿಲ್ಲ. ಅಧಿವೇಶನ ನಡೆಯುವ ಸಂದರ್ಭದಲ್ಲಿ ಹೀಗೆ ಆಡಳಿತ ಪಕ್ಷದ ಎಂಎಲ್ ಸಿಯನ್ನು ಈ ರೀತಿ ನಡೆಸಿಕೊಂಡಿದ್ದಾರೆ. ಎಫ್ ಐ ಆರ್ ನೋಡಿದರೆ ರಾಜ್ಯ ಸರ್ಕಾರ ಹಾಗೂ ಪೊಲೀಸರು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆಂದು ತಿಳಿಯುತ್ತದೆ. ಈ ಪ್ರಕರಣವನ್ನು ಇಲ್ಲಿಗೆ ಬಿಡಲು ಸಾಧ್ಯವಿಲ್ಲ. ತಪ್ಪಿತಸ್ಥರನ್ನು ಕೂಡಲೇ ಬಂಧನ ಮಾಡಬೇಕು. ಪೊಲೀಸರ ತನಿಖೆ ಬಗ್ಗೆ ನಾವು ಅನುಮಾನ ವ್ಯಕ್ತಪಡಿಸಿದ ರೀತಿಯಲ್ಲಿ ಎಫ್ ಐ ಆರ್ ಇದೆ. ಅಲ್ಲದೆ ಎಫ್ ಐ ಆರ್ ನಲ್ಲಿ ಕಠಿಣ ಸೆಕ್ಷನ್ ಹಾಕಿ ಎಂದು ವಿಜಯೇಂದ್ರ ಆಗ್ರಹಿಸಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಉತ್ತರಕ್ಕೆ ವಿರೋಧ ಪಕ್ಷದ ನಾಯಕರು ತೃಪ್ತರಾಗಲಿಲ್ಲ. ಹೀಗಾಗಿ ಚರ್ಚೆಯಲ್ಲಿ ಭಾಗವಹಿಸಿ ಬಳಿಕ ಧರಣಿ ನಡೆಸಲು ವಿಜಯೇಂದ್ರ, ಎಸ್ ಆರ್, ವಿಶ್ವನಾಥ್ , ಸತೀಶ್ ರೆಡ್ಡಿ ಹಾಗು ಇತರ ಶಾಸಕರು ನಿರ್ಧರಿಸಿದರು.
ಈ ವೇಳೆ ಏಕಾಏಕಿ ಅಭಯ್ ಪಾಟೀಲ್ ಬಾವಿಗಿಳಿದು ಧರಣಿಗೆ ಮುಂದಾದರು.
ಅಷ್ಟರಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಏಕಾಏಕಿ ಸಭಾತ್ಯಾಗ ಎಂದು ಪ್ರಕಟಿಸಿದರು. ಈ ಸಭಾತ್ಯಾಗ ನಿರ್ಧಾರದಿಂದ ಬಿಜೆಪಿ ಶಾಸಕರು ಗೊಂದಲಕ್ಕೆ ಒಳಗಾದರು. ಅಲ್ಲದೇ ವಿಪಕ್ಷ ನಾಯಕರ ಈ ನಿರ್ಧಾರ ಬಿಜೆಪಿ ನಾಯಕರಲ್ಲೇ ಅಸಮಾಧಾನಕ್ಕೆ ಕಾರಣವಾಯಿತು. ಇದರಿಂದ ಬೇಸರಾಗಿ ಸಿಟ್ಟಿನಿಂದ ಎಸ್.ಆರ್.ವಿಶ್ವನಾಥ್, ಅಭಯ್ ಪಾಟೀಲ್ ಕೊಠಡಿಗೆ ತೆರಳಿದ ಸನ್ನಿವೇಶ ಜರುಗಿತು. ಬಳಿಕ ಇವರಿಬ್ಬರನ್ನು ಆರ್.ಅಶೋಕ್, ವಿಜಯೇಂದ್ರ ಮತ್ತು ಯತ್ನಾಳ್ ಸಮಾಧಾನಪಡಿಸಿ ಕರೆ ತಂದ ನಾಟಕೀಯ ಬೆಳವಣಿಗೆ ನಡೆಯಿತು.

ಆರ್.ಅಶೋಕ್ ನಿರ್ಧಾರದಿಂದ ಗಲಬಿಲಿಗೊಂಡು ಬಿಜೆಪಿ ಶಾಸಕರು ಸಹ ಸಭೆಯಿಂದ ಹೊರ ಬಂದರು. ಅಷ್ಟರೊಳಗೆ ಮೊಗಸಾಲಿಯಲ್ಲಿಯೂ ಶಾಕಸರಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ವಿಧಾನಸಭೆಯಲ್ಲಿ ಗೃಹ ಸಚಿವರ ಉತ್ತರಕ್ಕೆ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದರು. ಚರ್ಚೆ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ಯು.ಟಿ ಖಾದರ್, ನಿಮಗೆ ಯಾವುದೂ ಸಮಾಧಾನವಾಗಲ್ಲ. ನಿಮಗೆ ಇನ್ನೆಂತಹ ಉತ್ತರ ಕೊಡಬೇಕು. ಉತ್ತರ ಕರ್ನಾಟಕದ ಸಮಸ್ಯೆಗಿಂತ ಇದೇ ಹೆಚ್ಚಾಗಿದೆ. ನೀವು ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚಿಸಿ ಎಂದು ಯತ್ನಾಳ್ ಕಾಲೆಳೆದರು.
ಒಟ್ಟಿನಲ್ಲಿ ಆಡಳಿತ ಪಕ್ಷವನ್ನು ಬಗ್ಗು ಬಡಿಯಬೇಕಾದ ಕಮಲ ಪಾಳಯ ಸ್ವಪಕ್ಷದ ಅಸಮಾಧಾನ ಶಮನ ಮಾಡುವ ಸರ್ಕಸ್ ಮಾಡುವುದರಲ್ಲೇ ನಿರತವಾಗಿರುವುದು ವಿಪರ್ಯಾಸ.




