IPL 2024: ಐಪಿಎಲ್ ಹರಾಜು ಪ್ರಕ್ರಿಯೆ: ಆಸೀಸ್ ತಂಡದ ಆಟಗಾರರಿಗೆ ಫುಲ್‌ ಡಿಮಾಂಡ್

ಬಹುನಿರೀಕ್ಷಿತ ಐಪಿಎಲ್ 2024ರ ಹರಾಜು ಪ್ರಕ್ರಿಯೆಗೆ ಕೆಲವೇ ದಿನಗಳಷ್ಟು ಬಾಕಿ ಉಳಿದಿದ್ದು, ಎಲ್ಲಾ ಫ್ರಾಂಚೈಸಿಗಳು ಉತ್ತಮ ಆಟಗಾರರನ್ನು ಖರೀದಿಸುವ ಲೆಕ್ಕಾಚಾರದೊಂದಿಗೆ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ. ಈ ನಡುವೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಬಹುಬೇಡಿಕೆ ಎದುರಾಗಿದೆ.

ಇತ್ತೀಚೆಗೆ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದಿರುವ ಆಸ್ಟ್ರೇಲಿಯಾ ತಂಡದ ಆಟಗಾರರು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯುವ ತವಕದಲ್ಲಿದ್ದಾರೆ. ವಿಶ್ವಕಪ್ ಹಿನ್ನೆಲೆಯಲ್ಲಿ 2023ರ ಐಪಿಎಲ್ ಟೂರ್ನಿಯಿಂದ ಆಸೀಸ್ ತಂಡದ ಹಲವು ಆಟಗಾರರು ಐಪಿಎಲ್ ಪಂದ್ಯಾವಳಿಯಲ್ಲಿ ಆಡುವ ನಿರ್ಧಾರದಿಂದ ಹೊರಗುಳಿದಿದ್ದರೂ. ಆದರೆ ಈ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ಆಡುವ ನಿರ್ಧಾರ ಮಾಡಿರುವ ಹಲವು ಆಟಗಾರರು, ಯಾವ ತಂಡ ಸೇರುತ್ತೇವೆಂಬ ನಿರೀಕ್ಷೆಯಲ್ಲಿದ್ದಾರೆ.

ವಿಶ್ವಕಪ್ ಗೆಲುವಿನ ಯಶಸ್ಸಿನ ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಬಹುಬೇಡಿಕೆ ಎದುರಾಗಿದೆ. ಪ್ರಮುಖವಾಗಿ ಆಸ್ಟ್ರೇಲಿಯಾ ತಂಡವನ್ನ ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿ ಚಾಂಪಿಯನ್ ಪಟ್ಟತಂದುಕೊಡುವಲ್ಲಿ ಯಶಸ್ವಿಯಾಗಿದ್ದ ನಾಯಕ ಪ್ಯಾಟ್ ಕಮ್ಮಿನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡುವ ನಿರೀಕ್ಷೆಯಲ್ಲಿದ್ದಾರೆ. ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗದ ಬೌಲರ್ ಆಗಿರುವ ಮಿಚೆಲ್ ಸ್ಟಾರ್ಕ್, ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಖರೀದಿಯಾಗುವ ನಿರೀಕ್ಷೆ ಹೊಂದಿದ್ದಾರೆ.

ಅಲ್ಲದೆ ಆಸೀಸ್ ತಂಡದ ಮಧ್ಯಮ ಕ್ರಮಾಂಕದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಶ್ ಇಂಗ್ಲಿಸ್ ಕೂಡ ಐಪಿಎಲ್ ಟೂರ್ನಿಯಲ್ಲಿ ದೊಡ್ಡ ಮೊತ್ತವನ್ನು ಪಡೆದು ಬಲಿಷ್ಠ ತಂಡವನ್ನು ಕೂಡಿಕೊಳ್ಳುವ ನೀರಿಕ್ಷೆಯಲ್ಲಿದ್ದಾರೆ. ಮತ್ತೋರ್ವ ಸ್ಟಾರ್ ವೇಗದ ಬೌಲರ್ ಜೋಶ್ ಹೇಜಲ್ವುಡ್, ಟಿ20 ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್ ನಲ್ಲಿ ಇಲ್ಲದಿದ್ದರೂ, ಹೊಸ ತಂಡಕ್ಕೆ ಸೇರ್ಪಡೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಇನ್ನೂ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಪ್ರಶಸ್ತಿ ತಂದುಕೊಡುವಲ್ಲಿ ಯಶಸ್ವಿಯಾಗಿದ್ದ ಟ್ರಾವಿಸ್ ಹೆಡ್ ಕೂಡ ಈ ಬಾರಿ ಐಪಿಎಲ್ ನಲ್ಲಿ ಆಡುವ ತವಕದಲ್ಲಿದ್ದು, ಯಾವ ತಂಡಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ಕುತೂಹಲದಿಂದಲೇ ಹರಾಜು ಪ್ರಕ್ರಿಯೆಯನ್ನು ಎದುರು ನೋಡುತ್ತಿದ್ದಾರೆ.

More News