Prahlad Joshi: ಬಿಜೆಪಿ ನಾಯಕರ ಮುಸುಕಿನ ಗುದ್ದಾಟ: ಬಹಿರಂಗವಾಗಿ ಮಾತಾಡ್ಬೇಡಿ ಎಂದ ಜೋಶಿ

ಹುಬ್ಬಳ್ಳಿ: ಪಕ್ಷದಲ್ಲಿ ಒಂದು ವ್ಯವಸ್ಥೆ ಇದೆ. ಪಕ್ಷದ ಯಾವುದೇ ವಿಷಯವನ್ನು ಬಹಿರಂಗವಾಗಿ ಮಾತನಾಡಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಅಧಿವೇಶನದಲ್ಲಿ ಬಿಜೆಪಿ ನಾಯಕರ ಮುಸುಕಿನ ಗುದ್ದಾಟ ವಿಚಾರದ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಅಧಿವೇಶನದಲ್ಲಿ ನಡೆದ ಗೊಂದಲದ ಕುರಿತು ಬಹಿರಂಗ ಹೇಳಿಕೆ ಸರಿಯಲ್ಲ ಎಂದು ಶಾಸಕ ವಿಶ್ವನಾಥ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿ ಕಾರಿದರು. ಬಿಜೆಪಿಯಲ್ಲಿ ಆಂತರಿಕ ಕಿತ್ತಾಟವಿಲ್ಲ. ಸಂವಹನದ ಕೊರತೆಯಿಂದ ವಿಧಾನಸಭೆ ಅಧಿವೇಶನದಲ್ಲಿ ಆ ರೀತಿ ಘಟನೆ ನಡೆದಿದೆ. ಧರಣಿ ಮಾಡಬೇಕೊ ಅಥವಾ ಸಭಾತ್ಯಾಗ ಮಾಡಬೇಕು ಅನ್ನೋ ಬಗ್ಗೆ ಗೊಂದಲವಾಗಿದೆ.
ಎಂದು ಸಮಜಾಯಿಷಿ ನೀಡಿದರು.

ಅಸಮಧಾನದ ಬಗ್ಗೆ ನಾವು ಸಹ ಶೀಘ್ರವೆ ಸಭೆ ಮಾಡ್ತೇವೆ. ಕೆಲವರಲ್ಲಿ ಉಂಟಾಗಿರುವ ಗೊಂದಲ ನಿವಾರಿಸುತ್ತೇವೆ. ವಿಶ್ವನಾಥ ಅವರ ಬಕೆಟ್ ರಾಜಕಾರಣ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ವಿಶ್ವನಾಥ್ ಏನ್ ಹೇಳಿದ್ದಾರೆ ಗೊತ್ತಿಲ್ಲ. ಪಕ್ಷದಲ್ಲಿ ಒಂದು ವ್ಯವಸ್ಥೆ ಇದೆ. ಪಕ್ಷದ ಯಾವುದೇ ವಿಷಯವನ್ನು ಬಹಿರಂಗವಾಗಿ ಮಾತನಾಡಬಾರದು.
ಈ ನಿಟ್ಟಿನಲ್ಲಿ ವಿಶ್ವನಾಥ್ ಅವರನ್ನು ಕರೆದು ಮಾತಾಡುತ್ತೇನೆ. ಬಿಜೆಪಿ ಶಿಸ್ತಿನಿಂದ ನಡೆದುಕೊಂಡ ಪರಿಣಾಮ ದೇಶದ ಅನೇಕ ರಾಜ್ಯಗಳಲ್ಲಿ ನಾವು ಅಧಿಕಾರಕ್ಕೆ ಬಂದಿದ್ದೇವೆ. ಸಂಸದ, ಶಾಸಕರು ಸೇರಿ ದೇಶದಲ್ಲಿ ಸುಮಾರು 50 ಸಾವಿರ ಜನಪ್ರತಿನಿಧಿಗಳು ಬಿಜೆಪಿಯಲ್ಲಿದ್ದಾರೆ. ಸಮಸ್ಯೆಗಳಿದ್ದರೆ ಒಟ್ಟಿಗೆ ಕೂತು ಮಾತನಾಡುವಂತೆ ಜೋಶಿ ಸಲಹೆ ನೀಡಿದರು.

ಕಿನ್ಯಾಗೆ ಬೆಣ್ಣೆ ಕರ್ನಾಟಕಕ್ಕೆ ಸುಣ್ಣ ಎಂಬ ಸಿದ್ದರಾಮಯ್ಯ ಆರೋಪ ವಿಚಾರದ ಕುರಿತು ಮಾತನಾಡಿದ ಅವರು,
ವಿದೇಶ ಮಂತ್ರಾಲಯಕ್ಕೆ ಜಾಗತಿಕ ಮಟ್ಟದಲ್ಲಿ ಅನೇಕ ನೆರವು ನೀಡಬೇಕಾಗುತ್ತೆ. ಬೇರೆ ಬೇರೆ ರಾಜ್ಯಗಳಿಗೆ ಎಸ್ ಡಿ ಆರ್ ಎಫ್ ಮತ್ತು ಎನ್ ಡಿ ಆರ್ ಎಫ್ ಮೂಲಕ ಹಣ ಕೊಡ್ತಾ ಇರುತ್ತೇವೆ. ರಾಜ್ಯ ಸರ್ಕಾರ ತನ್ನ ಖಾತೆಯಲ್ಲಿರುವ ಹಣ ಖರ್ಚು ಮಾಡಲಿ. ಕೇಂದ್ರ ಸರ್ಕಾರ ನೀಡಿರುವ ಹಣ ಮೊದಲು ಖರ್ಚು ಮಾಡಲಿ. ಅದನ್ನು ಬಿಟ್ಟು ಈ ರೀತಿ ಆರೋಪ ಮಾಡೋದು ಸರಿಯಲ್ಲ. ರಾಜ್ಯ ಸರ್ಕಾರದ ಬಳಿ ಹಣ ಇಲ್ಲದೆ ಇರೋದರಿಂದ ಬರ ಪರಿಹಾರ ಕಾಮಗಾರಿ ಕೈಗೊಳ್ಳುತ್ತಿಲ್ಲ. ಭ್ರಷ್ಟಾಚಾರ, ಬೇರೆ ಬೇರೆ ಸ್ಕೀಮ್ ಗಳ ಹೆಸರಲ್ಲಿ ಹಣ ವ್ಯಯ ಮಾಡಲಾಗುತ್ತಿದೆ. ಕೆಎಸ್ಆರ್ಟಿ ಮತ್ತು ವಿದ್ಯುತ್ ನಿಗಮಗಳಿಗೆ ದುಡ್ಡು ಕೊಟ್ಟಿಲ್ಲ.
ಮೊದಲು ನೀವು ಬರ ಪರಿಹಾರ ಕಾಮಗಾರಿ ಆರಂಭಿಸಿ.
ಭಾರತ ದೇಶ ದೊಡ್ಡದಿದ್ದು ಅನೇಕ ರಾಜ್ಯಗಳಿರೋದ್ರಿಂದ ಹಣ ಬರೋದು ತಡವಾಗಬಹುದು. ಮೋದಿ ಸರ್ಕಾರ ಬಂದ ನಂತರ ಕರ್ನಾಟಕಕ್ಕೆ ಎಷ್ಟು ಹಣ ಕೊಟ್ಟಿದ್ದೇವೆ ಅನ್ನೋದನ್ನ ಶೀಘ್ರವೇ ನಿಮ್ಮ ಮುಂದೆ ಇಡ್ತೇನೆ ಎಂದು ವಾಗ್ದಾಳಿ‌ ನಡೆಸಿದರು.

ಮೋದಿ ಅವರ ಹೆಸರು ತೆಗೆದುಕೊಂಡು ಬಯ್ಯದೇ ಇದ್ದಲ್ಲಿ ಸಿದ್ದರಾಮಯ್ಯಗೆ ಊಟ ರುಚಿಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದರು. ಇದೇ ವೇಳೆ ಯತ್ನಾಳ್ ಹೇಳಿಕೆ ಕುರಿತು ಮಾತನಾಡಿದ ಅವರು, ಯತ್ನಾಳ್ ಅವರು ತನ್ವೀರ್ ಕುರಿತು ಯಾವ ಕಾರಣದಿಂದ ಹೇಳಿದ್ದಾರೆ ಅನ್ನೋದು ಮುಖ್ಯ. ಯತ್ನಾಳ್ ಮಾಡಿರುವ ಗಂಭೀರ ಆರೋಪಕ್ಕೆ ಸಿಎಂ ಸ್ಪಷ್ಟನೆ ಕೊಡಬೇಕು.
ನೀವು ಅಲ್ಲಿಗೆ ಹೋಗಬಾರದು ಅಂತ ಸಿಎಂಗೆ ಪೊಲೀಸರು ಹೇಳಿದ್ದಾಗಿ ಯತ್ನಾಳ ಆರೋಪಿಸಿದ್ದಾರೆ.
ಪ್ರಧಾನಿಗಳು ಭೇಟಿಯಾದ ಕಾರ್ಯಕ್ರಮದಲ್ಲಿ ತನ್ವೀರ್ ಭಾಗಿಯಾಗಿರುವ ಫೋಟೋ ಹಾಕಿದ್ದಾರೆ. ಅದು ಸರಿ ಇದ್ದರೂ ಇರಬಹುದು. ಆ ಸಂದರ್ಭದಲ್ಲಿ ತನ್ವೀರ್ ಗೆ ಐಸಿಎಸ್ ನಂಟು ಇತ್ತು ಇಲ್ಲವೋ ಗೊತ್ತಿಲ್ಲ. ಈಗ ತನ್ವೀರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ತನಿಖಾ ಸಂಸ್ಥೆಗಳು ಏನು ಹೇಳುತ್ತೋ ಅದನ್ನು ನಾವು ಪರಿಗಣಿಸಬೇಕು. ಸಿದ್ದರಾಮಯ್ಯನವರು ಈ ರೀತಿ ಬಾಲಿಷ ಹೇಳಿಕೆ ಕೊಡೋದು ಅವರ ವ್ಯಕ್ತಿತ್ವಕ್ಕೆ ಶೋಭೆ ತರಲ್ಲ. ಸಿದ್ದರಾಮಯ್ಯ ಜವಾಬ್ದಾರಿಯಿಂದ ಮಾತನಾಡುವುದನ್ನು ಕಲಿಯಲಿ ಎಂದು‌ ಕುಟುಕಿದರು.

More News