Leelavati Death: ಕಳಚಿಬಿದ್ದ ಕನ್ನಡ ಚಿತ್ರರಂಗದ ಮಾಣಿಕ್ಯ… ನೋವುಗಳ ನಡುವೆಯೇ ಅರಳಿದ ಲೀಲಾಕಿರಣ!

ಕನ್ನಡ ಚಿತ್ರರಂಗದ ಮಾಣಿಕ್ಯ, ಸಕಲ ನೋವುಗಳ ನಡುವೆಯೂ ಅರಳಿದ ಜೀವ ನಟಿ ಲೀಲಾವತಿ.
ತಮ್ಮ ೮೬ ವರ್ಷಗಳ ಬದುಕಿನುದ್ದಕ್ಕೂ ಸಿಹಿಗಿಂತ ಕಹಿ ಅನುಭವಗಳನ್ನು ಪಡೆದು, ಅವುಗಳನ್ನು ದಿಟ್ಟವಾಗಿ ಎದುರಿಸಿ ಗೆದ್ದವರು ಲೀಲಾವತಿ.
ಕನ್ನಡ ಚಿತ್ರರಂಗದಲ್ಲಿ ದುಡಿದ ಅವರು, ತಮಿಳು, ತೆಲುಗಿನಲ್ಲೂ ತಮ್ಮ ಅಭಿನಯದ ಸವಿವುಣಿಸಿದ್ದಾರೆ.
ಅಂತಿಮ ಕ್ಷಣದವರೆಗೂ ಹೋರಾಟದ ಜೀವನ ನಡೆಸಿದ ಜೀವಕ್ಕೆ ಅವರ ಮಗನಾದ ವಿನೋದ್ ರಾಜ್ ಜತೆಯಾಗಿದ್ದರು.

ತಮ್ಮ ಆರನೇ ವಯಸ್ಸಿನಲ್ಲಿ ತಂದೆ ತಾಯಿ ಕಳೆದುಕೊಂಡು, ಜೀವನ ಪೊರೆಯಲು ಶ್ರೀ ಸತ್ಯ ಸಾಮ್ರಾಜ್ಯ ನಾಟಕ ಕಂಪನಿಯಲ್ಲಿ ಬಣ್ಣ ಹಚ್ಚಿದ ಲೀಲಾವತಿ ಜೀವನದಲ್ಲಿನ ಹಲವು ಏರುಪೇರುಗಳ ನಡುವೆಯೂ ಬದುಕು ಕಟ್ಟಿಕೊಂಡು ಸಾಗಿದವರು. ಅವರ ಮೂಲ ಹೆಸರು ಲೀಲಾಕಿರಣ. ಓದಿದ್ದು ಎರಡನೇ ತರಗತಿ. ಆದರೆ ತಮ್ಮ ಕಲಾನೈಪುಣ್ಯತೆಯಿಂದ ಜಮನಗೆದ್ದು ಕನ್ನಡ ಚಿತ್ರರಂಗದಲ್ಲಿ ಕಲಾ ಸರಸ್ವತಿಯಾಗಿ ಮೆರೆದವರು.
ಶನಿವಾರ ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ರವೀಂದ್ರ ಕಲಾಕ್ಷೇತ್ರದಲ್ಲಿ ಸಹ ನಟಿ ಲೀಲಾವತಿ ಅವರ ಅಂತಿಮ ದರ್ಶನ ಕಲ್ಪಿಸಲಾಗಿತ್ತು. ಈ ವೇಳೆ ಗಣ್ಯಾತಿಗಣ್ಯರು, ಕನ್ನಡ ಚಿತ್ರರಂಗದ ನಟ ನಟಿಯರು, ಸಾರ್ವಜನಿಕರು ನಟಿ ಲೀಲಾವತಿ ಅವರ ಪಾರ್ಥೀವ ಶರೀರವನ್ನು ಕೊನೆಯದಾಗಿ ಕಣ್ತುಂಬಿಕೊಂಡರು.

ಈ ವೇಳೆ ಹಲವರು ಲೀಲಾವತಿ ಅವರ ಜೀವನ ಸಂಘರ್ಷ, ಅವರು ಎದುರಿಸಿದ ಸವಾಲುಗಳು, ಪಟ್ಟು ಕಷ್ಟಗಳು, ಕಣ್ಣೀರಾದ ದಿನಗಳನ್ನು ನೆನೆದು ಗದ್ಗದಿತರಾದರು.

ನಟಿ ಲೀಲಾವತಿ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುನಾರ್, ಮಾಜಿ ಸಿಎಂಗಳಾದ ಯಡಿಯೂರಪ್ಪ, ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಇನ್ನಿತರರು ಹಾಗು ಸ್ಯಾಂಡಲ್‌ವುಡ್ ನಟ ನಟಿಯರು ಕಂಬನಿ ಮಿಡಿದಿದ್ದಾರೆ. ನಟಿ ತಾರಾ ಸುಧಾರಾಣಿ, ಶ್ರುತಿ, ಮಾಳವಿಕಾ, ಭವ್ಯ ಅವರು ಲೀಲಾವತಿ ಅಂತಿಮ ದರ್ಶನ ಪಡೆದರು. ಈ ಸಮಯದಲ್ಲಿ ಲೀಲಾವತಿ ಜೊತೆಗಿನ ಬಾಂಧವ್ಯದ ಬಗ್ಗೆ ನಟ ನಟಿಯರು ಅಭಿಪ್ರಾಯ ಹಂಚಿಕೊಂಡರು.

ಲೀಲಾವತಿ ಅವರ ಅಭಿನಯ, ಹಲವು ದಶಕಗಳ ಪಯಣ ಎಲ್ಲವೂ ನಮಗೆ ಪ್ರೇರಣೆ. ಕಲಾವಿದೆಯಾಗಿ ಅವರಿಗೆ ಅವರೇ ಸಾಟಿ ಎಂದು ಲೀಲಾವತಿ ಅವರನ್ನು ನಟಿ ಮಾಳವಿಕಾ ಬಣ್ಣಿಸಿದರು.

ಲೀಲಾವತಿ ಅವರ ಅಭಿನಯ, ಹಲವು ದಶಕಗಳ ಪಯಣ ಎಲ್ಲವೂ ನಮಗೆ ಪ್ರೇರಣೆ. ಕಲಾವಿದೆಯಾಗಿ ಅವರಿಗೆ ಅವರೇ ಸಾಟಿ ಎಂದು ಲೀಲಾವತಿ ಅವರನ್ನು ನಟಿ ಮಾಳವಿಕಾ ಬಣ್ಣಿಸಿದರು.

ಸಾರ್ಥಕ ಬದುಕನ್ನು ಲೀಲಾವತಿ ಅಮ್ಮ ಕಟ್ಟಿಕೊಂಡಿದ್ದಾರೆ. ಎಲ್ಲರಿಗೂ ಕಷ್ಟ ಬರುತ್ತದೆ. ಆದರೆ ತುಂಬಾ ಧೈರ್ಯದಿಂದ ದಿಟ್ಟ ಮಹಿಳೆಯಾಗಿ ಅವರು ನಿಭಾಯಿಸಿದ್ದಾರೆ. ಅಮ್ಮ ಸಿಂಗಲ್ ಪೇರೆಂಟ್ ಆಗಿ ಒಳ್ಳೆಯ ವ್ಯಕ್ತಿನ್ನಾಗಿ ಮಗನನ್ನು ಬೆಳೆಸಿದರು. ಭಗವಂತ ಕೊಟ್ಟ ಆಯಸ್ಸಿನಲ್ಲಿ ಆದರ್ಶವಾಗಿ ಬೆಳೆದರು. ನಮ್ಮಂತಹ ಅನೇಕ ಕಲಾವಿದರಿಗೆ ಆದರ್ಶರಾಗಿದ್ದಾರೆ. ಅಮ್ಮ, ಮಗ ಬೆಳೆದ ರೀತಿ ಆಶ್ಚರ್ಯವಾಗುತ್ತದೆ. ತಾಯಿಯನ್ನು ಕಳೆದುಕೊಂಡ ವಿನೋದ್ ರಾಜ್ ಹೇಗಿರ್ತಾರೋ ಅನಿಸುತ್ತಿದೆ. ಎಲ್ಲರ ಆಶೀರ್ವಾದದಿಂದ ವಿನೋದ್ ರಾಜ್ ಚೆನ್ನಾಗಿರಲಿ ಎಂದರು ನಟಿ ಶ್ರುತಿ.

ಚಿತ್ರರಂಗದಲ್ಲಿ ಲೀಲಾವತಿ ಅಮ್ಮನ ಸಾಧನೆ ಅಪಾರವಾದದ್ದು, ಪ್ರೀತಿಯ ಅಮ್ಮ ನಮ್ಮನ್ನೆಲ್ಲ ಅಗಲಿದ್ದಾರೆ. ಲೀಲಾವತಿ ಅವರ ತಾಳ್ಮೆಯ ಮೂರ್ತಿಯಾಗಿದ್ದರು. ನಿಸರ್ಗಕ್ಕೆ ಹತ್ತಿರವಾಗಿ ಜೀವನ ಮಾಡುತ್ತಿದ್ದರು. ವಿನೋದ್, ಲೀಲಾವತಿ ಬಾಂಧವ್ಯ ಅಪರೂಪದ್ದು ಎಂದು ಹಿರಿಯ ನಟಿ ಭವ್ಯ ಹೇಳಿದ್ದಾರೆ. ‘ಹೊಸಬಾಳು’ ಸಿನಿಮಾದಲ್ಲಿ ಲೀಲಾವತಿ ಜೊತೆ ತೆರೆಹಂಚಿಕೊಂಡಿದ್ದರ ಬಗ್ಗೆ ಭವ್ಯ ಸ್ಮರಿಸಿದ್ದಾರೆ.
ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ (ಡಿ.8) ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಇಹಲೋಕ ತ್ಯಜಿಸಿದ್ದರು. ಸೋಲದೇವನ ಹಳ್ಳಿ ಮನೆಯಲ್ಲಿ ಹಿಂದು ಸಂಸ್ಕಾರದಂತೆ ಸರ್ಕಾರಿ ಸಕಲ ಗೌರವದೊಂದಿಗೆ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

More News