ದಸರಾ ಆನೆ ಅರ್ಜುನ ಕಾಡಾನೆ ಜತೆಗೆ ಕಾದಾಡಿ ಸಾವನ್ನಪ್ಪಿದ ಘಟನೆಗೆ ಸಾಕ್ಷ್ಯವೆಂಬಂತೆ ಮತ್ತೊಂದು ಕಾರ್ಯಾಚರಣೆ ವೀಡಿಯೋ ಬಿಡುಗಡೆಯಾಗಿದೆ.
ಆನೆ ಅರ್ಜುನನ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯ ಸೇರಿದಂತೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಲಾಗಿತ್ತು. ಈ ನಡುವೆ ಈಗ ಬಿಡುಗಡೆಯಾಗಿರುವ ವಿಡಿಯೋ ಅರ್ಜುನ ಆನೆ ಹೇಗೆ ಸಾವನ್ನಪ್ಪಿದೆ ಎಂಬುದಕ್ಕೆ ಸಾಕ್ಷ್ಯ ಒದಗಿಸಿದಂತಿದೆ.
ಕಾಡಾನೆ ಜೊತೆಗಿನ ಕಾದಾಟದಲ್ಲಿ ಮರಣವನ್ನಪ್ಪಿದ ದಸರಾ ಅಂಬಾರಿ ಆನೆ ಅರ್ಜುನನ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದೆ. ಜತೆಗೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪವೂ ಕೇಳಿ ಬಂದಿದ್ದು ತನಿಖೆ ನಡೆಯುತ್ತಿದೆ. ಕಾರ್ಯಾಚರಣೆಯ ಅಂತಿಮ ಕ್ಷಣದ ಕೊನೆಯ 2 ನಿಮಿಷದ ವಿಡಿಯೋ, ಕಾರ್ಯಾಚರಣೆಗೆ ಕಾಡಿನ ಒಳಗೆ ಹೋದ ಫೋಟೋಗಳು ಮಾಧ್ಯಮಗಳಿಗೆ ಲಭ್ಯವಾಗಿವೆ.
ಡಿ. 4ರಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಸಮೀಪದ ಬಾಳೆಕೆರೆ ಬಳಿ ಅಡಗಿದ್ದ ಒಂಟಿ ಸಲಗ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗಿತ್ತು.
ಈ ವಿಡಿಯೋದಲ್ಲಿ ನೀಲಗಿರಿ ತೋಪಿನಲ್ಲಿ ನಿಂತಿದ್ದ ಮದವೇರಿದ್ದ ಕಾಡಾನೆ ಅರ್ಜುನ ಆನೆ ಮೇಲೆ ದಾಳಿ ಮಾಡಿತ್ತು.ಈ ವೇಳೆ ಅರ್ಜುನ ಆನೆಯ ಮೇಲೆ ಅರ್ಜುನ ಆನೆ ಮಾವುತ ವಿನು ಆತನ ಹಿಂದೆ ವೈದ್ಯ ರಮೇಶ್, ಅವರ ಹಿಂದೆ ಭೀಮ ಆನೆಯ ಮಾವುತ ಗುಂಡ, ಅವರ ಹಿಂದೆ ಅನಿಲ್ ಎಂಬ ಹುಡುಗ ಸೇರಿ ನಾಲ್ವರು ಕುಳಿತಿದ್ದರು.
ಮೊದಲ ಬಾರಿ ಕಾಡಾನೆ ದಾಳಿ ಮಾಡಿದಾಗ ಅರ್ಜುನ ಹಾಗೂ ಸಿಬ್ಬಂದಿ ಸೇರಿಕೊಂಡು ಕಾಡಾನೆ ಓಡಿಸಿದ್ದರು.
ಆದರೆ, ಮೊದಲ ಕಾದಾಟದ ವೇಳೆ ಅರ್ಜುನ ಆನೆ ಮೇಲೆ ಕುಳಿತಿದ್ದ ಡಾ. ರಮೇಶ್ ಕೈಯಲ್ಲಿದ್ದ ಅರೆವಳಿಕೆ ನಿಯಂತ್ರಣ ತಪ್ಪಿ ಕೆಳಗೆ ಬೀಳುವ ಸ್ಥಿತಿಯಲ್ಲಿ ಫಯರ್ ಆಗಿದೆ. ಈ ವೇಳೆ ಡಾ. ರಮೇಶ್‌ರಿಂದ ಫಯರ್ ಆದ ಅರಿವಳಿಕೆ ಪ್ರಶಾಂತ್ ಆನೆಗೆ ತಗುಲಿದ್ದು ಈ ಸಂದರ್ಭದಲ್ಲಿ ಕಾಡಾನೆ ವಾಪಸ್ ಓಡಿ ಹೋಗಿದೆ.

ತಕ್ಷಣವೇ ಅರ್ಜುನ ಆನೆಯಿಂದ ಇಳಿದ ಡಾ ರಮೇಶ್, ವಿನು, ಗುಂಡ ಎಲ್ಲರೂ ಪ್ರಶಾಂತ್ ಆನೆ ನೋಡಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಅನಿಲ್ ಮಾತ್ರವೇ ಅರ್ಜುನನ ಮೇಲೆ ಕುಳಿತಿದ್ದರು. ಈ ಸಮಯದಲ್ಲಿ ಕಾಡಾನೆ ಮತ್ತೆ ಅರ್ಜುನ ಆನೆ ಮೇಲೆ ದಾಳಿ ನಡೆಸಿದೆ. ಆಗ ಅನಿಲ್ ಕೆಳಗೆ ಉರುಳಿ ಬಿದ್ದಿದ್ದಾರೆ.
ಮೊದಲ ಕಾದಾಟದ ವೇಳೆ ಚೆರ್ರೆ ಹಾಗೂ ಕೂಳೆಯಿಂದ ಗಾಯಗೊಂಡಿದ್ದ ಅರ್ಜುನ ಸಹಾಯಕ್ಕೆ ಯಾರು ಇಲ್ಲದೆ ಕಾದಾಟದಲ್ಲಿ ಸೋತು ನೆಲಕ್ಕುರುಳಿದ್ದಾನೆ.
ಸದ್ಯ ಅರ್ಜುನನ ಸಾವಿಗೆ ಕಾರಣವಾದ ಕಾಡಾನೆಗೆ ವಿಕ್ರಾಂತ್ ಎಂದು ಅರಣ್ಯ ಇಲಾಖೆ ತಾತ್ಕಾಲಿಕ ಹೆಸರಿಟ್ಟಿದೆ.
ನ 24 ರಿಂದ ಒಟ್ಟು 6 ಆನೆಗಳ ಕಾರ್ಯಾಚರಣೆ ಯಶಸ್ವಿಯಾಗಿದೆ. ಮೂರು ಹೆಣ್ಣು ಆನೆ, ಎರಡು ಗಂಡು ಆನೆ, ಒಂದು ಮಕ್ನಾ ಆನೆ (ಗಂಡು ಅಲ್ಲದ ಹೆಣ್ಣು ಅಲ್ಲದ) ಎಲ್ಲಾ 6 ಆನೆಗಳಿಗೆ ರೇಡಿಯೋ ಕಾಲರ್ ಹಾಕಿ ಸ್ಥಳಾಂತರ ಮಾಡಲಾಗಿತ್ತು. ಆದರೆ ಇನ್ನು ಮೂರು ಆನೆಗಳ ಕಾರ್ಯಾಚರಣೆ ಬಾಕಿ ಇತ್ತು. ವಿಕ್ರಾಂತ್ ಆನೆ ಏಳನೇ ಟಾರ್ಗೆಟ್ ಆಗಿತ್ತು.




