Abolition of Article 370: ಆರ್ಟಿಕಲ್ 370 ರದ್ದು, ಸುಪ್ರೀಂ ತೀರ್ಪಿನಿಂದ ಶತಕೋಟಿ ಭಾರತೀಯರಿಗೆ ಹರ್ಷ: ಬಿ.ವೈ ವಿಜಯೇಂದ್ರ

ಬೆಳಗಾವಿ: ಆರ್ಟಿಕಲ್ 370 ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಪುರಸ್ಕಾರ ಮಾಡಿರುವುದು ಶತಕೋಟಿ ಭಾರತೀಯರಿಗೆ ಹರ್ಷ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹರ್ಷ ವ್ಯಕ್ತಪಡಿಸಿದರು.

ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಅಂದು ಪ್ರಧಾನಿ ನರೇಂದ್ರ ಮೋದೀ ಸರ್ಕಾರದ ಆರ್ಟಿಕಲ್ 370 ರದ್ದತಿಯ ಚಾರಿತ್ರಿಕ ನಿರ್ಧಾರ – ಇಂದು ನ್ಯಾಯಾಲಯದ ಸಂವಿಧಾನಿಕ ಬೆಂಬಲದ ಐತಿಹಾಸಿಕ ಪುರಸ್ಕಾರ ಎಂದಿದ್ದಾರೆ.

ಕೋಟ್ಯಾಂತರ ಭಾರತೀಯರ ಬಹುವರ್ಷಗಳ ನಿರೀಕ್ಷೆ ಹಾಗೂ ಭಾರತದ ಸಾರ್ವಭೌಮತ್ವದ ಸುರಕ್ಷತೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಆರ್ಟಿಕಲ್ 370 ರದ್ದತಿ ಹಾಗೂ ಕೇಂದ್ರಾಡಳಿತ ಪ್ರದೇಶದ ನಿರ್ಧಾರವನ್ನು ಸಂವಿಧಾನಬದ್ಧ ಆದೇಶ ಎಂದು ಮಾನ್ಯ ಮಾಡುವ ಮೂಲಕ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಸಂವಿಧಾನಿಕ ಪೀಠ ಕೇಂದ್ರ ಸರ್ಕಾರದ ನಿರ್ಧಾರವನ್ನು ‘ಸಂವಿಧಾನಿಕ ಕ್ರಮ’ ಎಂದು ನೀಡಿರುವ ಐತಿಹಾಸಿಕ ತೀರ್ಪು ಶತಕೋಟಿ ಭಾರತೀಯರಿಗೆ ಹರ್ಷ ಉಂಟುಮಾಡಿದೆ ಎಂದು ಹೇಳಿದ್ದಾರೆ.

ಇಂತಹ ಮಹತ್ವದ ನಿರ್ಧಾರ ಹಾಗೂ ಸಂವಿಧಾನದ ಮನ್ನಣೆಗಾಗಿ ಜನ ಸಂಘದ ಸ್ಥಾಪನೆಯ ಮುಂಚೂಣಿಯಲ್ಲಿ ನಿಂತು ತಮ್ಮ ಜೀವನವನ್ನೇ ಸಮರ್ಪಿಸಿಕೊಂಡ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಕನಸು ನನಸಾದ ಈ ಸಂದರ್ಭ ಅವರು ಹೇಳಿದ “ ಒಂದು ದೇಶ, ಒಂದು ಸಂವಿಧಾನ….” ಅಖಂಡ ಭಾರತದ ಪರಿಕಲ್ಪನೆಯ ಮಾತುಗಳು ಮತ್ತೆ ಮಾರ್ದನಿಸಿ ವಿಜಯ ಘೋಷ ಮೊಳಗಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

More News