ಬೆಳಗಾವಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದೆ. ಆದ್ರೆ ಕಮಲ ಪಾಳಯದಲ್ಲಿ ಅಸಮಧಾನ ತಣ್ಣಗಾಗುವ ಲಕ್ಷಣ ಕಾಣ್ತಿಲ್ಲ.
ಬಿಜೆಪಿಯ ಫೈರ್ ಬ್ರ್ಯಾಂಡ್ ಎಂದೇ ಖ್ಯಾತರಾದ ಶಾಸಕ ಯತ್ನಾಳ್ ಆಡಳಿತ ಪಕ್ಷಕ್ಕಷ್ಟೇ ಅಲ್ಲದೇ, ಸ್ವಪಕ್ಷಕ್ಕೂ ದುಸ್ವಪ್ನವಾಗಿ ಪರಿಣಮಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ಸ್ಥಾನ ಹಂಚಿಕೆ ಬೆನ್ನಲ್ಲೇ ಪಕ್ಷದ ವಿರುದ್ಧ ಗರಂ ಆಗಿರುವ ಯತ್ನಾಳ್ ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ವಿ.ಸೋಮಣ್ಣ ಸೇರಿದಂತೆ ಹಲವು ನಾಯಕರನ್ನು ಸೋಲಿಸಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಷಡ್ಯಂತ್ರ ನಡೆಸಿದ್ದರು ಎಂದು ಆರೋಪಿಸಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಮಾಜಿ ಸಿಎಂ ಯಡಿಯೂರಪ್ಪ ಹೈಕಮಾಂಡ್ನವರನ್ನು ಬ್ಲ್ಯಾಕ್ ಮೆಲ್ ಮಾಡಿದ್ದರು. ಲೋಕಸಭಾ ಚುನಾವಣೆ ಪ್ರಚಾರಕ್ಕೆ ಹೋಗಲ್ಲ. ಶಿವಮೊಗ್ಗ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮಾಡ್ತಿನಿ. ಉಳಿದ ಕಡೆ ಹೋಗಲ್ಲ ಎಂದಿದ್ದರು. ಹೀಗಾಗಿಯೇ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಹೈಕಮಾಂಡ್ ಕೂಡ ಯಾಕೆ ಹೆದರಿತೋ ಗೊತ್ತಿಲ್ಲ. ಸುಮ್ಮನೆ ಶಿಸ್ತು, ಶಿಸ್ತು ಎಂದು ಹೇಳುತ್ತಾರೆ, ನಾವೇನು ಗುಲಾಮರಾ? ನಮ್ಮದೇನು ಶಕ್ತಿ ಇಲ್ಲವೇ, ನಮ್ಮ ಹಿಂದೆಯೂ ಜನ ಇದ್ದಾರೆ. ನೀವೆಲ್ಲ ಗಟ್ಟಿಯಾಗಿ ನಿಲ್ಲಿ, ಎಲ್ಲರನ್ನೂ ಸರಿ ಮಾಡೊಣ ಎಂದು ಹೈಕಮಾಂಡ್ ನಾಯಕರನ್ನ ಕುಟುಕಿದರು.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ರ ವಿರುದ್ಧವೇ ವಾಗ್ದಾಳಿ ನಡೆಸಿದ ಯತ್ನಾಳ್, ಚುನಾವಣೆ ಸಂದರ್ಭದಲ್ಲಿ ನಡೆದ ಆಶ್ಚರ್ಯ ಏನು ಎಂದರೆ, ಬೊಮ್ಮಾಯಿ ಯವ್ರನ್ನ ಸೋಲಿಸಲು ವಿಜಯೇಂದ್ರ ಹಣ ಕಳಿಸಿದ್ದರು. ಈಗ ಅವರೇ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ ಎಂದು ದೂರಿದರು. ಇದರ ಬಗ್ಗೆ ಖಚಿತ ಮಾಹಿತಿ ನಿಮಗಿದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬೊಮ್ಮಾಯಿ ಅವರೇ ವಿಜಯೇಂದ್ರ ಹಣ ಕಳುಹಿಸಿದ್ದ ಬಗ್ಗೆ ನನಗೆ ಹೇಳಿದ್ದರು. ಒಮ್ಮೆ ಸತ್ಯ ಹೊರಬರಬೇಕು ರಾಜ್ಯದಲ್ಲಿ. ಅಪ್ಪ, ಮಕ್ಕಳು ಏನು ಮಾಡಿದ್ದಾರೆ ಎಂಬುದು ಗೊತ್ತಾಗಬೇಕು ಎಂದು ಬಹಿರಂಗವಾಗಿ ವಾಗ್ದಾಳಿ ನಡೆಸಿದರು.
ಇತ್ತ ಯತ್ನಾಳ್ ರ ಆರೋಪಕ್ಕೆ ಉತ್ತರಿಸಲು ವಿಜಯೇಂದ್ರ ನಿರಾಕರಿಸಿದ್ದಾರೆ. ಬೊಮ್ಮಾಯಿ ಅವ್ರನ್ನ ಸೋಲಿಸಲು ಹಣ ರವಾನೆ ಮಾಡಿದ್ದರಂತಲ್ಲಾ..? ನಿಜವೇ ಎಂಬ ಪ್ರಶ್ನೆಗೆ ದಿನಕ್ಕೊಂದು ಹೇಳಿಕೆ ಕೊಡಲು ಆಗಲ್ಲ ಎಂದು ಕೈ ಮುಗಿದು ಹೋಗುವ ಮೂಲಕ ಪರೋಕ್ಷವಾಗಿ ಟಾಂಗ್ ಕೊಟ್ಟರು.




