ಬೆಂಗಳೂರು : ಆಟೋ ರಿಕ್ಷಾಗಳಿಗೆ ಬಳಸುವ ಎಲ್‌ಪಿಜಿ ಗ್ಯಾಸ್ ಬೆಲೆಯು ಕಳೆದ ಒಂದು ವರ್ಷದಲ್ಲಿ ಸುಮಾರು ಎರಡು ಪಟ್ಟು ಏರಿಕೆಯಾಗಿರುವುದನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿಯ ಆಟೋ ಚಾಲಕರ ಘಟಕವು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಆಟೋ ಘಟಕದ ರಾಜ್ಯಾಧ್ಯಕ್ಷರಾದ ಅಯೂಬ್ ಖಾನ್, “ಪದೇಪದೇ ಎಲ್‌ಪಿಜಿ ಬೆಲೆ ಏರಿಕೆ ಮಾಡುವ ಕೇಂದ್ರ ಸರ್ಕಾರವು ಆಟೋ ಚಾಲಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಲೀಟರ್‌ಗೆ 38 ರೂಪಾಯಿಯಿದ್ದ ಎಲ್‌ಪಿಜಿ ಬೆಲೆ ಈಗ 66 ರೂಪಾಯಿ ತಲುಪಿದೆ. ಅಂದರೆ, ಕೇವಲ ಒಂದು ವರ್ಷದಲ್ಲಿ 28 ರೂಪಾಯಿ ಏರಿಕೆಯಾಗಿದೆ ಎಂದು ಆರೋಪಿಸಿದರು.
ಕಳೆದ ವಾರ ಒಂದೇ ಸಲ 6 ರೂಪಾಯಿ ಹೆಚ್ಚಿಸಲಾಗಿದೆ. ಪ್ರಯಾಣಿಕರು ನೀಡುವ ಹಣವು ಎಲ್‌ಪಿಜಿಗೆ ಖರ್ಚಾಗುತ್ತಿದ್ದು, ಆದಾಯವಿಲ್ಲದೇ ಚಾಲಕರ ಬದುಕು ದುಸ್ತರವಾಗಿದೆ. ಆಟೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಇಂಧನ ಬೆಲೆ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಎಲ್‌ಪಿಜಿ ಪೂರೈಸುವ ಕಂಪನಿಗಳ ಉದ್ಯಮಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಬೆಲೆ ಏರಿಕೆ ಮಾಡಲಾಗುತ್ತಿದೆ. ಈ ಸರ್ಕಾರಕ್ಕೆ ಆಟೋ ಚಾಲಕರು ಹಾಗೂ ಪ್ರಯಾಣಿಕರ ಹಿತ ಬೇಕಾಗಿಲ್ಲ. ಉದ್ಯಮಿಗಳು ಕೊಡುವ ಹಣದ ಆಸೆಗಾಗಿ ಸಾಮಾನ್ಯ ಜನರ ಜೀವನವನ್ನು ಶೋಚನೀಯ ಸ್ಥಿತಿಗೆ ತಳ್ಳಲಾಗುತ್ತಿದೆ. ಉಳ್ಳವರ ಪರವಾಗಿರುವ ಈ ಸರ್ಕಾರವನ್ನು ಆಡಳಿತದಿಂದ ಕಿತ್ತೊಗೆಯುವವರೆಗೂ ಜನಸಾಮಾನ್ಯರಿಗೆ ನೆಮ್ಮದಿ ಎಂಬುದಿಲ್ಲ” ಎಂದು ಅಯೂಬ್ ಖಾನ್ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಎಎಪಿ ಆಟೋ ಚಾಲಕರ ಘಟಕದ ಅಧ್ಯಕ್ಷರಾದ ವೆಂಕಟೇಗೌಡ ಮಾತನಾಡಿ, “ಎಲ್‌ಪಿಜಿ ಬೆಲೆಯನ್ನು ಮನಸೋ ಇಚ್ಛೆ ಹೆಚ್ಚಿಸುತ್ತಿರುವ ನರೇಂದ್ರ ಮೋದಿಯವರ ಸರ್ಕಾರವು ದೇಶ ಕಂಡ ಅತ್ಯಂತ ಜನವಿರೋಧಿ ಸರ್ಕಾರವಾಗಿದೆ. ಸರ್ಕಾರಕ್ಕೆ ಆಟೋ ಚಾಲಕರ ಬಗ್ಗೆ ಕಾಳಜಿಯಿದ್ದರೆ ಈಗಲಾದರೂ ಬೆಲೆ ಇಳಿಕೆ ಮಾಡಲಿ” ಎಂದು ಆಗ್ರಹಿಸಿದರು.

ಬೆಂಗಳೂರು ನಗರದ ಎಎಪಿ ಆಟೋ ಚಾಲಕರ ಘಟಕದ ಪ್ರಧಾನ ಕಾರ್ಯದರ್ಶಿ ಉಸ್ಮಾನ್, ಕರ್ನಾಟಕ ಪ್ರಜಾಧಿಕಾರ ಹೋರಾಟ ಸಮಿತಿಯ ಕಾರ್ಯದರ್ಶಿ ಜಗನ್, ಎಎಪಿ ಮುಖಂಡರಾದ ಲಕ್ಷ್ಮೀಕಾಂತ ರಾವ್, ಅತೀಕ್ ಅಹ್ಮದ್, ಅನಂತರಾಮು, ರಾಮಕೃಷ್ಣ, ಹೇಮಂತ್ ಹಾಗೂ ಅನೇಕ ಆಟೋ ಚಾಲಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.




