ಬೆಳಗಾವಿ: ಸುವರ್ಣ ಸೌಧ, ಡಿ.12:(ಕರ್ನಾಟಕ ವಾರ್ತೆ): ಬೆಳಗಾವಿ ಜಿಲ್ಲೆ ರಾಯಬಾಗ ಮತಕ್ಷೇತ್ರದ ರಾಯಬಾಗ ಮತ್ತು ಚಿಕ್ಕೋಡಿ ತಾಲೂಕುಗಳ ವ್ಯಾಪ್ತಿಯ 39 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಕ್ರಮವಹಿಸುವುದಾಗಿ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹೇಳಿದರು.
ಮಂಗಳವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಭಾಗವಹಿಸಿ ಶಾಸಕ ದುಯೋರ್ಧನ ಐಹೊಳೆ ಅವರ ಪ್ರಶ್ನೆಗೆ ಉತ್ತರಿಸಿದರು.

ಈ ಯೋಜನೆಯ ಕಾಮಗಾರಿಯು ಶೇ. 80 ರಷ್ಟು ಪೂರ್ಣಗೊಂಡಿದ್ದು, ಯೋಜನೆಯ ಜಾಕವೇಲ್ ಮತ್ತು ಪಂಪ್ ಹೌಸ್ ನಿರ್ಮಾಣ ಸ್ಥಳದಲ್ಲಿ ರೈತರು ತಕರಾರು ಮಾಡಿರುವುದರಿಂದ ಕಾಮಗಾರಿ ಸ್ಥಗಿತವಾಗಿದೆ. ತಕರಾರು ಮಾಡಿರುವ ರೈತ ನ್ಯಾಯಾಲಯದಲ್ಲಿ ಈ ಕುರಿತು ಮೊಕದ್ದಮೆ ಹೂಡಿದ್ದು, ಸಮಸ್ಯೆಯನ್ನು ಬಗೆಹರಿಸಿ ಕಾಮಗಾರಿ ಪೂರ್ಣಗೊಳಿಸಲು ಶೀಘ್ರ ಕ್ರಮವಹಿಸಲಾಗುವುದು. ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಈ ಕುರಿತು ಚರ್ಚಿಸಲು ರೈತರ ಬಳಿ ಕಳಿಸಲಾಗುವುದು. ಶಾಸಕರು, ಅಧಿಕಾರಿಗಳು ಸಂಬಂಧಪಟ್ಟ ರೈತರೊಂದಿಗೆ ಚರ್ಚಿಸಿ ಸೌಹಾರ್ಧವಾಗಿ ಸಮಸ್ಯೆಯನ್ನು ಬಗೆಹರಿಸಬೇಕು. ಇಲಾಖೆಯಿಂದ ಅಗತ್ಯ ಅನುದಾನ, ಸಹಕಾರ ನೀಡಲಾಗುವುದೆಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕರಗಾಂವ ಏತ ನೀರಾವರಿ ಕಾಮಗಾರಿಯನ್ನು ಪುನರ್ ಪ್ರಾರಂಭಿಸಲು ಶಾಸಕರು ವಿನಂತಿಸಿದ್ದು, ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮವಹಿಸುವುದಾಗಿ ಅವರು ತಿಳಿಸಿದರು.
ಶಿಂಧೋಗಿ ಭಾಗದ 8 ಹಳ್ಳಿಗಳ ಕುಡಿಯುವ ನೀರಿನ, ನೀರಾವರಿ ಸಮಸ್ಯೆಗಳ ಪರಿಹರಿಸಲು ಕ್ರಮ: ಪ್ರಶ್ನೋತ್ತರ ವೇಳೆಯಲ್ಲಿ ಸವದತ್ತಿ ಯಲ್ಲಮ್ಮಾ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವಾಸ ವಸಂತ ವೈದ್ಯ ಅವರು ಮಾತನಾಡಿ, ಸವದತ್ತಿ ಯಲ್ಲಮ್ಮಾ ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ಮಲಪ್ರಭಾ ಎಡದಂಡೆ ಕಾಲುವೆ ವ್ಯಾಪ್ತಿಯ ಬಲದಂಡೆ ಕಾಲುವೆಗೆ ನಿರ್ಮಿಸಿರುವ ರಿವರ್ ಸೈಫನ್ ಒಡೆದಿರುವುದರಿಂದ ಶಿಂಧೋಗಿ ಭಾಗದ ಸುಮಾರು 8 ಹಳ್ಳಿಗಳ 500 ಎಕರೆ ಜಮೀನು ನೀರಾವರಿಯಿಂದ ವಂಚಿತವಾಗಿದೆ ಮತ್ತು ಈ ಭಾಗದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗಿದೆ ಎಂದು ಹೇಳಿದರು.
ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉತ್ತರಿಸಿ, ಈ ಹಳೆಯ ರಿವರ್ ಸೈಫನ್ ಬದಲಾಗಿ ಹೊಸ ತಂತ್ರಜ್ಞಾನದ ಮೂಲಕ ನೀರಾವರಿ ಸೌಲಭ್ಯವನ್ನು ಪುನರ್ ಸ್ಥಾಪಿಸಲು ಅನುಕೂಲವಾಗುವಂತೆ ವಿವರವಾದ ಅಂದಾಜು ಪಟ್ಟಿಯನ್ನು ತಯಾರಿಸಲು ಸರ್ವೇ ಕನ್ಸ್‍ಲ್ಟೆನ್ಸಿಗೆ ನೀಡಿದ್ದು, ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಸರ್ವೇ ಕಾಮಗಾರಿ ಪೂರ್ಣಗೊಂಡ ನಂತರ ಶಕ್ಯತೆ ಮತ್ತು ಅನುದಾನದ ಲಭ್ಯತೆ ಅನುಸಾರ ಪರಿಶೀಲಿಸಿ ಕ್ರಮವಹಿಸಲಾಗುವುದು. ಆದರೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ತಕ್ಷಣ ಕ್ರಮವಹಿಸಲಾಗುವುದೆಂದು ಅವರು ತಿಳಿಸಿದರು.




