Women Naked Assault Case: ಮಹಿಳೆಯನ್ನ ಬೆತ್ತಲು ಗೊಳಿಸಿ ಹಲ್ಲೆ ಪ್ರಕರಣ: ತನಿಖೆ ನಡೆಸಿ ವರದಿ ಸಲ್ಲಿಸಿ ಎಂದು ಸರ್ಕಾರಕ್ಕೆ ಆದೇಶಿಸಿದ ಹೈಕೋರ್ಟ್

ಬೆಳಗಾವಿ: ಮಗನ ಮೇಲಿನ ಸಿಟ್ಟಿಗಾಗಿ ತಾಯಿಯನ್ನೇ ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಮನಸೋ-ಇಚ್ಛೆ ಹಲ್ಲೆ ಮಾಡಿದ, ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸೋ ಘಟನೆ ವಿರುದ್ಧ ಹೈಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.

ಹೊಸ ವಂಟಮೂರಿಯ ದುಂಡಪ್ಪ ಗಡ್ಕರಿ (24) ಹಾಗೂ ಪ್ರಿಯಾಂಕ (22) ಪ್ರೀತಿಸುತ್ತಿದ್ದರು. ಪ್ರಿಯಾಂಕ ಮನೆಯವರು ಇವರಿಬ್ಬರ ಪ್ರೀತಿ ಒಪ್ಪದೇ, ಬೇರೊಬ್ಬ ವರನೊಂದಿಗೆ ನಿಶ್ಚಿತಾರ್ಥ ಮಾಡಿದ್ದರು. ಸೋಮವಾರ (ಡಿ.11) ಪ್ರಿಯಾಂಕ ಅವರಿಗೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಆದರೆ, ಭಾನುವಾರ ರಾತ್ರಿಯೇ ದುಂಡಪ್ಪ– ಪ್ರಿಯಾಂಕ ಮನೆ ಬಿಟ್ಟು ಓಡಿಹೋದರು. ಇದರಿಂದ ಸಿಟ್ಟಿಗೆದ್ದ ಯುವತಿಯ ಪಾಲಕರು ಹಾಗೂ ಸಂಬಂಧಿಕರು, ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ, ವಿದ್ಯುತ್‌ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದರು.

ಈ ಅಮಾನವೀಯ ಘಟನೆ ಕಂಡು ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್​ನ ಮುಖ್ಯ ನ್ಯಾಯಾಧೀಶರಾದ ಪ್ರಸನ್ನ ಬಿ.ವರಾಳೆ ಹಾಗೂ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ, ಭಾರತವೂ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದೆ. ಕರ್ನಾಟಕ ರೀತಿಯ ಪ್ರಗತಿಪರ ರಾಜ್ಯಗಳಲ್ಲಿ ಇಂತಹ ಹೀನಾಯ ಕೃತ್ಯ ನಡೆದಿದೆ. ಪ್ರಕರಣವನ್ನು ತನಿಖೆ ನಡೆಸಿ ವರದಿ ಸಲ್ಲಿಸಿ ಎಂದು ಸರ್ಕಾರಕ್ಕೆ ಆದೇಶಿಸಿದೆ.

ಪ್ರಸ್ತುತ ವಂಟಮೂರಿ ಗ್ರಾಮದಲ್ಲಿ ಮಹಿಳೆ ಒಬ್ಬರನ್ನು ಬೆತ್ತಲೆಗೊಳಿಸಿ, ಬೀದಿಯಲ್ಲಿ ಓಡಾಡಿಸಿ, ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನ ಬಂಧಿಸಲಾಗಿದೆ. ಯುವತಿಯ ತಾಯಿ ಪಾರ್ವತಿ ಬಸಪ್ಪ ನಾಯಕ, ಅಜ್ಜಿ ಯಲ್ಲವ್ವ ರುದ್ರ‍ಪ್ಪ ನಾಯಕ, ಸಂಗೀತಾ ಸದಾಶಿವ ಹೆಗ್ಗನಾಯಕ, ಗಂಗವ್ವ ಬಸ‍ಪ್ಪ ವಾಲಿಕಾರ ಮತ್ತು ವಂಟಮೂರಿ ಗ್ರಾಮದ ಶಿವಪ್ಪ ವಣ್ಣೂರಿ ಆರೋಪಿಯಾಗಿದ್ದು, ಬೆಳಗಾವಿಯ 4ನೇ ಜೆಎಂಎಫ್‌ಸಿ ನ್ಯಾಯಾಲಯವು ಎಲ್ಲ ಆರೋಪಿಗಳನ್ನು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

More News