ಬೆಳಗಾವಿ: ಜಾತಿ ಗಣತಿ ವಿವಾದ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತಿನಲ್ಲಿ ಸತ್ಯವಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಬೆಳಗಾವಿ ಸುವರ್ಣ ಸೌಧದಲ್ಲಿ ಬುಧವಾರ ಮಾತನಾಡಿದ ಅವರು, ಖರ್ಗೆ ಸಾಹೇಬರು ಹಿರಿಯರು.ಅವರ ಮಾತಿನಲ್ಲಿ ಸತ್ಯ ಇರುತ್ತದೆ ಎಂದು ಹೇಳಿದರು ಸಚಿವರು, ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಡಿಕೆಶಿ ಸಾಹೇಬರು ಉತ್ತರ ಕೊಟ್ಟಿದ್ದಾರೆ. ಏನಾಗಿದೆ, ಏನು ಬಿಡುತ್ತೆ ಆಮೇಲೆ ನೋಡೋಣ.
ಕಾಂತರಾಜ ಆಯೋಗ ವರದಿ ಬರಲಿ, ಬಂದ ಮೇಲೆ ನೋಡೋಣ ಎಂದರು.
ಜಾತಿಗಣತಿ ವಿಚಾರವಾಗಿ ರಾಜ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ಸುಶೀಲ್ ಕುಮಾರ್ ಮೋದಿ ಮಾತನಾಡಿ, 8 ವರ್ಷಗಳಾದರೂ ಕರ್ನಾಟಕದಲ್ಲಿ ಜಾತಿ ಜನಗಣತಿ ಬಿಡುಗಡೆ ಮಾಡಿಲ್ಲ. ಅಲ್ಲದೇ, ಬಿಡುಗಡೆ ಮಾಡಬಾರದು ಅಂತ ಡಿಕೆ ಶಿವಕುಮಾರ್ ಸಹಿ ಮಾಡಿದ್ದಾರೆ ಎಂದಿದ್ದರು.
ಬಿಜೆಪಿಯ ಸುಶೀಲ್ ಮೋದಿ ಮಾತಿಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಅವರೂ ಅಂದರೆ ಡಿಕೆ ಶಿವಕುಮಾರ್ ವಿರೋಧಿಸಿದ್ದಾರೆ, ಇವರೂ ಅಂದರೆ ಬಿಜೆಪಿಯವರೂ ವಿರೋಧಿಸಿದ್ದಾರೆ. ಮೇಲ್ಜಾತಿಯವರೆಲ್ಲಾ ಒಳಗೊಳಗೇ ಒಂದಾಗಿ ಬಿಟ್ಟಿದ್ದೀರಾ ಎಂದು ತಿರುಗೇಟು ಕೊಟ್ಟಿದ್ದರು.
ಬೆಳಗಾವಿಯಲ್ಲಿ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಇದೇ ಸಂದರ್ಭದಲ್ಲಿ ಮಾತನಾಡಿ, ಬಿ.ಎಸ್ ಯಡಿಯೂರಪ್ಪ ಅವರು ಮತ್ತು ಬಿಜೆಪಿಯ ಎಲ್ಲಾ ನಾಯಕರು ಇಲ್ಲಿ ಪ್ರತಿಭಟನೆ ಮಾಡುವ ಮೊದಲು ಕೇಂದ್ರ ಸರ್ಕಾರ ಬರ ಪರಿಹಾರ ಕೊಡುವುದನ್ನು ಆಗ್ರಹಿಸಲಿ ಎಂದರು.
ನೂರು ದಿನ ಉದ್ಯೋಗದ ಬದಲು, 150 ದಿನ ಉದ್ಯೋಗ ಕೊಡುವ ಕೆಲಸ ಮಾಡಲಿ. ಬಿಜೆಪಿಯವರು ಪ್ರಚಾರ ಪ್ರಿಯರಾಗಿದ್ದಾರೆ. ಇಲ್ಲಿ ಸದನದಲ್ಲಿ ಉತ್ತರ ಕರ್ನಾಟಕ ಸಮಸ್ಯೆ ಚರ್ಚೆ ಮಾಡಬಹುದು, ಮಾಡ್ತಿಲ್ಲ. ಬಿಜೆಪಿ ಬರೀ ಗಿಮಿಕ್ ಮಾಡ್ತಿದೆ ಎಂದು ಕಿಡಿಕಾರಿದರು.




